ಉಡುಪಿ: ರಾಜ್ಯದಲ್ಲಿ ಎರಡು ತಿಂಗಳಿಂದ ಆಡಳಿತ ನಡೆಯುತ್ತಿಲ್ಲ. ಶಾಸನ ಇಲ್ಲದ ದುಶ್ಯಾಸನ ಆಡಳಿತ ನಡೆಯುತ್ತಿದೆ. ಶೇ.90ರಷ್ಟು ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಮುಖ್ಯಮಂತ್ರಿ ಮೈಸೂರಿಗೆ- ಉಪಮುಖ್ಯಮಂತ್ರಿ ದೆಹಲಿಗೆ ಸೀಮಿತರಾಗಿದ್ದಾರೆ. ಈ ಸರಕಾರ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿದೆ. ಆದುದರಿಂದ ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುತ್ತೇವೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ, ಶಾಸಕರ ನಡುವೆ ವಿಶ್ವಾಸವಿಲ್ಲ. ಸದನದಲ್ಲಿ ನಾವು ವಿಶ್ವಾಸ ಮತವನ್ನು ಯಾಚಿಸುತ್ತೇವೆ. ಎನ್ಡಿಎ ಒಕ್ಕೂಟದಲ್ಲೂ ಕೂಡ ಈ ಬಗ್ಗೆ ಮಾತುಕತೆ ಮಾಡುತ್ತೇವೆ. ರಾಜ್ಯದ ಹಿತ ಮರೆತಿರುವ ಸರಕಾರವನ್ನು ಬಯಲಿಗೆಳೆಯುತ್ತೇವೆ ಎಂದರು.
ಕುರ್ಚಿಯನ್ನು ಉಳಿಸಿಕೊಳ್ಳಲು ಸ್ವಾಮೀಜಿಗಳ ಬಾಯಲ್ಲಿ ಹೇಳಿಕೆ ಕೊಡಿಸುತ್ತಿದ್ದಾರೆ. ಗೊಂದಲದ ವಾತಾವರಣವನ್ನು ಸಿಎಂ, ಡಿಸಿಎಂ ಸೃಷ್ಟಿ ಮಾಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ, ದಲಿತ ನಾಯಕ ಖರ್ಗೆಯನ್ನು ಕಡೆಗಣಿಸಲಾಗಿದೆ. ಬಿಜೆಪಿ ಯಾವುದೇ ಕಾರಣಕ್ಕೂ ಸರಕಾರ ರಚನೆ ಮಾಡಲು ಮುಂದಾಗಲ್ಲ. ಕಾಂಗ್ರೆಸ್ ತನ್ನ ಭಾರದಿಂದಲೇ ಕುಸಿದು ಬೀಳಲೆಂದು ಕಾದು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದರು


















