ಉಡುಪಿ: ಕೆಂಪು ಕಲ್ಲು ಮತ್ತು ಮರಳಿನ ಮೇಲೆ ಹೇರಿರುವ ನಿರ್ಬಂಧವನ್ನು ಸಡಿಲಿಸಬೇಕು ಎಂದು ಆಗ್ರಹಿಸಿ ಇವತ್ತು ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ಮಣಿಪಾಲದ ಟೈಗರ್ ಸರ್ಕಲ್ ನಿಂದ ಹೊರಟ ಪ್ರತಿಭಟನೆ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಪ್ತಿಗೊಂಡಿತು. ಅಲ್ಲಿ ಜಿಲ್ಲಾಧಿಕಾರಿಗೆ ಮನವಿ ನೀಡಿದ ಕರವೇ ಮುಖಂಡರು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.ಮುಖ್ಯವಾಗಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ತೆಗೆಯುವುದಕ್ಕೆ ನಿರ್ಬಂಧ ಇದೆ. ಹೊರಭಾಗದಿಂದ ಮರಳು ಮತ್ತು ಕೆಂಪು ಕಲ್ಲು ಸಾಗಾಣಿಕೆ ಮಾಡುತ್ತಿರುವ ಲಾರಿಗಳನ್ನು ಪೋಲಿಸರು ನಿಯಮ ಮೀರಿ ಹಿಡಿದು ಅವರ ಮೇಲೆ ಅನಾವಶ್ಯಕವಾಗಿ ಪ್ರಕರಣ ದಾಖಲಿಸುತ್ತಿದ್ದಾರೆ.
ಗಣಿಗಾರಿಕೆ ಇಲಾಖೆಯವರು ಮಾಡಬೇಕಾದ ಕೆಲಸವನ್ನು ಪೋಲಿಸರು ಮಾಡುತ್ತಿದ್ದು, ಇದರಿಂದ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುವ ಚಾಲಕರು ಮತ್ತು ಈ ವ್ಯವಹಾರವನ್ನೇ ನಂಬಿಕೊಂಡಿರುವ ಮಾಲೀಕರಿಗೆ ಸಮಸ್ಯೆ ಉಂಟಾಗಿದೆ.ಅಲ್ಲದೇ ಈ ಕೆಂಪು ಕಲ್ಲು ಮತ್ತು ಮರಳನ್ನೇ ನಂಬಿಕೊಂಡ ಸಾಮಾನ್ಯ ಜನ ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲಾಗದೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ.ಆದುದರಿಂದ ತಾವು ಈ ಮನವಿ ಪರಿಶೀಲಿಸಿ ಕೆಂಪು ಕಲ್ಲು ಮತ್ತು ಮರಳು ತೆಗೆಯುವುದು ಮತ್ತು ಅದರ ಸಾಗಾಣಿಕೆಯ ಮೇಲಿನ ನಿರ್ಬಂಧ ತೆಗೆದುಹಾಕಬೇಕು.
ಒಂದು ವೇಳೆ ನಿರ್ಬಂಧವನ್ನು ತೆರೆವುಗೊಳಿಸದೆ ಇದ್ದಲ್ಲಿ ಮುಂದಿನ ದಿನ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯ ಬಳಿ ಅಹೋರಾತ್ರಿ ಧರಣಿ ಮಾಡುವುದಾಗಿ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.












