ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿಯ ಜಯದುರ್ಗಾ ಪರಮೇಶ್ವರಿ ದೇವಸ್ಥಾನ 15 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇವಳದ ‘ಗರ್ಭಗುಡಿ ಹೊರತುಪಡಿಸಿ ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿ ನಿರ್ಮಾಣವಾಗುತ್ತಿದೆ. ನೂತನ ಕೊಡಿಮರ ಸಮರ್ಪಣೆ ಅಂಗವಾಗಿ ಜ.22ರಂದು ಸಂಜೆ 5ಕ್ಕೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಜೋಡುಕಟ್ಟೆಯಿಂದ ಜಯದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ಸಾಗುವ ಶೋಭಾಯಾತ್ರೆಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣ, ಪೂರ್ಣಕುಂಭ ಕಲಶದೊಂದಿಗೆ ಚಂಡೆ, ಸ್ಯಾಕ್ಸೋಫೋನ್, ಕುಣಿತ ಭಜನೆ, ವಾದ್ಯ, ಡೋಲು ಬಿರುದಾವಳಿಗಳು ಇರಲಿವೆ ಎಂದರು.
ಶಿಥಿಲಗೊಂಡಿರುವ ದೇವಸ್ಥಾನದ ಸುತ್ತುಪೌಳಿಯ ನಿರ್ಮಾಣ, ತೀರ್ಥಮಂಟಪ, ಧ್ವಜಸ್ತಂಭಕ್ಕೆ ಬೆಳ್ಳಿಕವಚ, ಗ್ರಾನೈಟ್, ವಸಂತ ಮಂಟಪ, ಬಯಲು ರಂಗಮಂಟಪ, ರಾಜಗೋಪುರ, ಅಡುಗೆ ಶಾಲೆ, ಸಮುದಾಯ ಭವನ ಸೇರಿದಂತೆ ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರವನ್ನು ಭಕ್ತರ ಸಹಕಾರದಿಂದ ನಡೆಸಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ದಿನೇಶ್ ಬೀಡು, ಮುಖಂಡರಾದ ನವೀನ್ ಶೆಟ್ಟಿ, ಗುರುರಾಜ್ ಉಪಾಧ್ಯಾ ಇದ್ದರು.