ಉಡುಪಿ: ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಶ್ರೀ ಕನಕದಾಸರ 538ನೇ ಜಯಂತಿ ಮಹೋತ್ಸವ ಹಾಗೂ 351 ಕುಂಭ ಕಲಶ ಮೆರವಣಿಗೆ ಶನಿವಾರ ವೈಭವದಿಂದ ನಡೆಯಿತು.
ಉಡುಪಿ ಜೋಡುಕಟ್ಟೆಯಲ್ಲಿ ಕುಂಭ ಕಲಶ ಮೆರವಣಿಗೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪ್ರಭಾವತಿ ಕೆ.ಆರ್ ಚಾಲನೆ ನೀಡಿದರು.
ಬಳಿಕ ಮೆರವಣಿಗೆಯು ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಕನಕದಾಸ ರಸ್ತೆ ಮೂಲಕ ಶ್ರೀಕೃಷ್ಣಮಠದ ಕನಕದಾಸ ಮಂದಿರದವರೆಗೆ ಸಾಗಿಬಂತು. 351 ಮಹಿಳೆಯರು ತಲೆಯ ಮೇಲೆ ಕುಂಭ ಕಲಶವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿಬಂದರು. ಕನಕದಾಸರ ಟ್ಯಾಬ್ಲೊ, ಡೊಳ್ಳು ಕುಣಿತ, ಭಜನೆ ಕುಣಿತ ಮೆರವಣಿಗೆಗೆ ಮೆರುಗು ನೀಡಿತು. ನೂರಾರು ಮಂದಿ ಹಾಲುಮತ ಸಮಾಜದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರಥಬೀದಿಯಲ್ಲಿರುವ ಕನಕದಾಸರ ಮೂರ್ತಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.
ಉದ್ಯಮಿ, ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ, ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿಯ ರಾಜ್ಯಾಧ್ಯಕ್ಷ ಓಂ ಶ್ರೀಕೃಷ್ಣಮೂರ್ತಿ, ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸಿದ್ದರಾಜು ಕೆ.ಎಸ್., ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘದ ಹನುಮಂತ ಎಸ್. ಡೊಳ್ಳಿನ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಬ. ಆಸಂಗಿ, ಜೊತೆ ಕಾರ್ಯದರ್ಶಿ ದೇವು ಎಸ್. ಪೂಜಾರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಮಹಾಂತೇಶ್ ಕಾಟಾಪುರ, ಸಲಹೆಗಾರರಾದ ಮುತ್ತಪ್ಪ ಕುರಿ, ಬಸವರಾಜ ಕುರುಬ ಮೊದಲಾದವರು ಉಪಸ್ಥಿತರಿದ್ದರು.


















