ಆ.15: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ನಲ್ಲಿ‌ ವೆಲಂಕಣ್ಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನೆ

ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ ದೇವಾಲಯದಲ್ಲಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನೋತ್ಸವ ಹಬ್ಬ ಆಗಸ್ಟ್‌ 15ರಂದು ದೇವಾಲಯದಲ್ಲಿ ನಡೆಯಲಿದೆ. ವೆಲಂಕಣಿ ಮಾತೆಯ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಾಲಯದ ಪ್ರಧಾನ ಧರ್ಮಗುರು ಆಲ್ಬನ್‌ ಡಿಸೋಜ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಗಸ್ಟ್‌ 6ರಿಂದ 14ರ ವರೆಗೆ ಉತ್ಸವದ ಪೂರ್ವಭಾವಿಯಾಗಿ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆಗಳು ಜರಗಲಿದ್ದು, 9 ದಿನಗಳ ನೊವೆನಾ ಸಮಯದಲ್ಲಿ ವಿಶೇಷ ಉದ್ದೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ನಡೆಸಲಾಗುವುದು. ಆ. 6ರಂದು ಸಂಜೆ 3.45ಕ್ಕೆ ಮಂಗಳೂರು ಸಂತ ಜೋಸೆಫ್‌ ಸೆಮಿನರಿ ರೆಕ್ಟರ್‌  ರೊನಾಲ್ಡ್‌ ಸೆರಾವೊ ಅವರು ನೊವೆನಾಗೆ ಚಾಲನೆ ನೀಡಲಿರುವ ಎಂದರು.
ಅನಂತರ ನೊವೆನಾ ಪ್ರಾರ್ಥನೆಗಳು ಮತ್ತು ಬಲಿಪೂಜೆ ನಡೆಯಲಿದ್ದು, ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಆ. 14ರಂದು ಮಧ್ಯಾಹ್ನ 2.45ಕ್ಕೆ ಆದಿ ಉಡುಪಿ ಜಂಕ್ಷನ್‌ ಬಳಿಯಿಂದ ಚರ್ಚ್ ವರೆಗೆ ಮಾತೆಯ ತೇರಿನ ಮೆರವಣಿಗೆ ನಡೆಯಲಿದೆ. ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜ ಮೆರವಣಿಗೆಗೆ ಚಾಲನೆ ನೀಡುವರು. ಸಂಜೆ 4 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್‌ ಪೌಲ್‌ ಸಲ್ದಾನ ಅವರು ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆಯನ್ನು ನೆರವೇರಿಸುವರು.
ಆ. 15ರಂದು ಸಂಜೆ 4 ಗಂಟೆಗೆ ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆ ಜರುಗಲಿದ್ದು, ಅದರ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್‌ ಐಸಾಕ್‌ ಲೋಬೊ ವಹಿಸುವರು. ಬೆಳಿಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯಬಲಿಪೂಜೆ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ,‌ ಸಂಜೆ 6 ಗಂಟೆಗೆ ಕನ್ನಡದಲ್ಲಿ ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷ್‌ನಲ್ಲಿ ಬಲಿಪೂಜೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ವಾರ್ಷಿಕ ಮಹಾ ಹಬ್ಬದ ಉಸ್ತುವಾರಿ ಪ್ರವೀಣ್‌ ಮೊಂತೆರೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್‌ ಅಂದ್ರಾದೆ, ಐಸಿವೈಎಂ ಅಧ್ಯಕ್ಷ ಮೆಲ್ವಿನ್‌ ಕರ್ವಾಲೋ, ಫ್ರಾನ್ಸಿಸ್‌ ಫರ್ನಾಂಡಿಸ್‌ ಉಪಸ್ಥಿತರಿದ್ದರು.