ಉಡುಪಿ: ಕಾಜಾರಗುತ್ತು ಗೆಳೆಯರ ಬಳಗ ಸಂಘದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಭಾನುವಾರ ನಡೆಯಿತು. ಬಡ ಅಂಗವಿಕಲ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲು ಹಾಗೂ ಶಾಲಾಭಿವೃದ್ಧಿ ನಿಧಿಗಾಗಿ ಗೆಳೆಯರ ಬಳಗ ಪ್ರತಿವರ್ಷ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆ.
ಉದ್ಯಮಿ ಅಶ್ವಿನ್ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಾಧು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಭಾಸ್ಕರ ಪೂಜಾರಿ ಮಾಂಬೆಟ್ಟು ಅವರಿಗೆ 20 ಸಾವಿರ, ನವೀನ್ ನಾಯರ್ ಗುತ್ತು ಮತ್ತು ಸುಕೇಶ್ ಮುತ್ತೂರು ಅವರಿಗೆ ತಲಾ 5 ಸಾವಿರ ಆರ್ಥಿಕ ನೆರವು ನೀಡಲಾಯಿತು. ಕಾಜಾರಗುತ್ತು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 50 ಸಾವಿರ ಸಹಾಯಧನ ವಿತರಿಸಲಾಯಿತು. ಸಂಘದ ವತಿಯಿಂದ ಈವರಗೆ 4 ಲಕ್ಷ ಮೊತ್ತದ ಸಹಾಯಧನ ವಿತರಣೆ ಮಾಡಲಾಗಿದೆ.
ನಿವೃತ್ತ ಶಿಕ್ಷಕ ದೇವೇಂದ್ರ ನಾಯಕ್ ಮುತ್ತೂರು, ಯಕ್ಷಗಾನ ಕಲಾವಿದ ದ್ವಿತೇಶ್ ಕಾಮತ್, ಪ್ರಗತಿಪರ ಕೃಷಿಕ ವಾಸುದೇವ ಭಟ್ ಪಟ್ಲ, ನಿವೃತ್ತ ಅಂಗನವಾಡಿ ಸಹಾಯಕಿ ಲೀಲಾವತಿ ಪ್ರಭು ಅವರನ್ನು ಸನ್ಮಾನಿಸಲಾಯಿತು. ಉದ್ಯಮಿಗಳಾದ ರವೀಂದ್ರ ಶ್ರೀಯಾನ್, ಅನಿಲ್ ಶೆಟ್ಟಿ ಮಾಂಬೆಟ್ಟು, ಅನಿಲ್ ಎಸ್. ಶೆಟ್ಟಿ, ಕಾಜಾರಗುತ್ತು ಶಾಲೆಯ ಶಿಕ್ಷಕಿ ಗಾಯತ್ರಿ, ನಿವೃತ್ತ ಶಿಕ್ಷಕ ಮುರಳೀಧರ್ ಭಟ್, ದೇಹದಾರ್ಡ್ಯ ಪಟು ಸೌಜನ್ ಶೆಟ್ಟಿ, ವಿಜಯ್ ಪುತ್ರನ್ ಹಿರೇಬೆಟ್ಟು ಉಪಸ್ಥಿತರಿದ್ದರು. ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯ ಸುದರ್ಶನ್ ಎಸ್. ಶೆಟ್ಟಿ ಸ್ವಾಗತಿಸಿ, ವಂದಿಸಿದರು.












