ಉಡುಪಿ: ಸರಕಾರ ಯಕ್ಷಗಾನ ಅಕಾಡೆಮಿಗೆ ನೀಡುವ ಅನುದಾನವನ್ನು ಯಕ್ಷಗಾನ ಕಲೆಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಸಂಘಸoಸ್ಥೆಗಳಿಗೆ ತಲುಪಿಸಬೇಕು ಎಂಬುದೇ ಅಕಾಡೆಮಿಯ ಆಶಯವಾಗಿದೆ. ಯಕ್ಷಗಾನ ಕಲೆ ಇಂದು ದೇಶವಿದೇಶದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣ ಅದಕ್ಕೆ ಸಿಕ್ಕಿರುವ ಜನಾದಾರದ ಜೊತೆಗೆ ಕಲಾಪೋಷಕರ ಪಾತ್ರ ಹಿರಿದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ದ.ಕ.ಜಿಲ್ಲೆಯ ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಯಕ್ಷಗಾನದ ವಿಭಿನ್ನ ಕಾರ್ಯಗಳನ್ನು ಒಳಗೊಂಡ ‘ಯಕ್ಷಧಾರೆ ‘ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಯಕ್ಷಗಾನ ಕಲೆ ಎಲ್ಲಾ ರೀತಿಯಿಂದಲೇ ಶ್ರೀಮಂತ ಕಲೆ. ಅದನ್ನು ನಂಬಿದವರ ಕ್ಕೆ ಬಿಡದು. ಯಕ್ಷಗಾನಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹ ಅಲ್ಲದೆ ಶ್ರೀಕೃಷ್ಣ ಮಠ, ಎಡನೀರು ಮಠ, ಕಟೀಲು, ಮಂದಾರ್ತಿ ಮೊದಲಾದ ಧಾರ್ಮಿಕ ಸಂಸ್ಥೆಗಳು ನೀಡುತ್ತಿರುವ ಪ್ರೋತ್ಸಾಹ ಅಪಾರ. ಇದರ ಜೊತೆಗೆ ಡಾ.ಶ್ಯಾಮ್ ಭಟ್ ಅವರಂತಹ ಮಹಾದಾನಿಗಳು, ಕಲಾಪೋಷಕರ ಸಂಖ್ಯೆಯೂ ಬಹಳ ದೊಡ್ಡದಿದೆ. ಆದ್ದರಿಂದ ಎಲ್ಲಾರ್ಥದಲ್ಲೂ ಯಕ್ಷಗಾನ ಇಂದು ಶ್ರೀಮಂತ ಕಲೆಯೇ ಆಗಿದೆ ಎಂದ ಅವರು, ಅಕಾಡೆಮಿ ಇಂದು ಯಕ್ಷಗಾನಕ್ಕೆ ತಮ್ಮ ಬದುಕನ್ನೇ ಸಮರ್ಪಿಸಿದ ಹಿರಿಯ ಕಲಾವಿದರು, ವಯೋ ನಿವೃತ್ತಿಹೊಂದಿರುವ ಕಲಾವಿದರು, ಮಹಿಳಾ ಕಲಾವಿದರನ್ನು ಕೂಡಾ ಗುರುತಿಸಿ ಅವರಿಗೆ ಪಶಸ್ತಿ ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಯಕ್ಷಗಾನಕ್ಕೆ ಸಂಬoಧಿಸಿದoತೆ ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿರುವುದು ಯಕ್ಷಗಾನ ಪ್ರದರ್ಶನಕ್ಕೆ ದೊಡ್ಡ ಹೊಡೆತ ನೀಡಲಿದೆ. ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಈಗ ತಾನೆ ಮಳೆಗಾಲ ಮುಗಿದು ಮೇಳಗಳು ತಿರುಗಾಟಕ್ಕೆ ಸಜ್ಜಾಗಿವೆ. ಇಂತಹ ಸಂದರ್ಭದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿರುವುದು ಸ್ವಾಗತಾರ್ಹವಲ್ಲ. ಅಕಾಡೆಮಿ ಈ ವಿಚಾರವನ್ನು ಸರಕಾರಕ್ಕೆ ಮನದಟ್ಟು ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ.ಟಿ.ಶಾಮ ಭಟ್ ಮಾತನಾಡಿ, ಡಾ. ತಲ್ಲೂರು ಶಿವರಾಮ ಶೆಟ್ಟರ ಅಧ್ಯಕ್ಷತೆಯಲ್ಲಿ ಅಕಾಡೆಮಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಂದೆ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸುವ ಚಿಂತನೆ ನಡೆದಿದೆ. ಈ ಬಗ್ಗೆ ಸರಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕಲೆ ಹಾಗೂ ಕಲಾವಿದರಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರದ ಅಧ್ಯಕ್ಷ ಟಿ. ಜಿ. ರಾಜರಾಮ ಭಟ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು. ಮೂಲ್ಯ ಆನೆಗುಂಡಿ, ಅಕಾಡೆಮಿ ಸದಸ್ಯರುಗಳಾದ ವಿದ್ಯಾಧರ ರಾವ್ ಜಲವಳ್ಳಿ, ರಾಜೇಶ್ ಕುಳಾಯಿ ಹಾಗೂ ಸುಧಾಕರ ಶೆಟ್ಟಿ ಉಳ್ಳಾಲ ಉಪಸ್ಥಿತರಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿ ಸದಸ್ಯ ಗುರುರಾಜ ಭಟ್ ಸ್ವಾಗತಿಸಿದರು. ಸಂಧ್ಯಾ ಗುರುರಾಜ ಭಟ್ ಕಾರ್ಯಕ್ರಮ ನಿರೂಪಿಸಿ, ಅಶ್ವಥ್ ಮಂಜನಾಡಿ ವಂದಿಸಿದರು.
ಯಕ್ಷಧಾರೆಯಲ್ಲಿ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ದಿ. ಬರೆ ಕೇಶವ ಭಟ್ ಅವರ ಸಂಸ್ಮರಣೆ, ಯಕ್ಷ ವಾಚಕ, ಯಕ್ಷ ಆಹಾರ್ಯ, ಬಡಗುತಿಟ್ಟು ಹಾಗೂ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಿತು.












