ಮನುಷ್ಯನ ಆಂತರಿಕ ತುಮುಲಗಳನ್ನು ಕಾವ್ಯ ಅಭಿವ್ಯಕ್ತಿಸುತ್ತದೆ: ಡಾ. ರಾಜಶೇಖರ್

ಉಡುಪಿ: ಮನುಷ್ಯನ ಆಂತರಿಕ ತುಮುಲಗಳನ್ನು ಕಾವ್ಯ ಅಭಿವ್ಯಕ್ತಿಸುತ್ತದೆ. ತನ್ನ ಓದಿನ ಬಳಿಕ ಮನಸ್ಸಿನಲ್ಲಿ ಕಾವ್ಯ ಹುಟ್ಟಿಸುವಂಥ ಕಾವ್ಯ ಅತ್ಯುತ್ತಮ ಎಂದು ಸಾಹಿತಿ ಡಾ. ರಾಜಶೇಖರ ಮಠಪತಿ ಹೇಳಿದರು.
ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಅಲ್ಲಮನ ಗಜಲ್‌ಗಳು ಜೀವನಪರ ಕಾವ್ಯ. ಮನಸ್ಸಿನ ಏರಿಳಿತಗಳನ್ನು ಗಜಲ್‌ಗಳ ಸಾಲುಗಳಲ್ಲಿ ಹಿಡಿದಿಟ್ಟಿರುವುದು ಜಕಾಪುರೆಯವರ ವಿಶೇಷತೆ.
ಕಾವ್ಯದ ಶಕ್ತಿಯನ್ನು ಅರಿಯುವ ಪ್ರಯತ್ನ ಕಾವ್ಯಾನ್ವೇಷಣೆಯ ಮೂಲಕ ಆಗಬೇಕಿದೆ ಎಂದ ಅವರು, ಜಕಾಪುರೆ ಬರೆದ ಹಲವು ಕವನಗಳನ್ನು ಉದಾಹರಿಸಿದರು. 2019ರ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕ ಗಿರೀಶ
ಜಕಾಪುರೆ ಸಾಹಿತ್ಯ ಮತ್ತು ಸಮಾಜ  ಪ್ರತಿಯೊಬ್ಬರ ಬದುಕಿನ ಆಯಾಮಗಳು. ಸಮಾಜವನ್ನು ಬಿಟ್ಟು ಸಾಹಿತ್ಯವಿಲ್ಲ. ಒಬ್ಬ ಸಾಹಿತಿ ತನ್ನ ಸಾಹಿತ್ಯ ಪ್ರಕಾರವನ್ನು ಕಂಡುಕೊಳ್ಳಲು ಬರವಣಿಗೆಯಲ್ಲಿ ಬಹುದೂರ ಸಾಗುವ ಅವಶ್ಯಕತೆ ಇದೆ, ಈ ಪ್ರಶಸ್ತಿ ನನಗೆ ದೊರಕಿರುವುದು ನನ್ನ ಕಾವ್ಯದ ಮೌಲ್ಯವನ್ನು ಹೆಚ್ಚಿಸಿದೆ ಎಂದರು.
ಕಡೆಂಗೋಡ್ಲು ಕಾವ್ಯದ ಪುನರವಲೋಕನ ವಿಶೇಷ ಉಪನ್ಯಾಸವನ್ನು ಶ್ರೀ ಬೆಳಗೋಡು ರಮೇಶ್ ಭಟ್ ನಡೆಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ ಅಕಾಡೆಮಿ ಅಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್  ಮಾತನಾಡಿ, ಕಡೆಂಗೋಡ್ಲು ಶಂಕರಭಟ್ಟರ
ಕಾವ್ಯ ಮತ್ತು ಕವಿತೆಗಳು ವಿದ್ಯಾರ್ಥಿಗಳಿಗೆ ಪಠ್ಯಗಳಾಗಿ ಅಳವಡಿಕೆಯಾಗಬೇಕು ಹಾಗೂ ಇಂತಹ ಸಾಹಿತ್ಯದ ಬಗೆಗಿನ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸುವುದು  ಅಧ್ಯಾಪಕರ ಜವಾಬ್ದಾರಿ ಎಂದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಕಾರ್ಯಕ್ರಮದಲ್ಲಿ ಎಂ.ಜಿ.ಎಂ ಪ್ರಾಂಶುಪಾಲ ಪ್ರೊ. ಎಂ.ಜಿ.ವಿಜಯ್ ಉಪಸ್ತಿತರಿದ್ದರು.  ಪ್ರಫುಲ್ಲ ವಂದಿಸಿದರು. ಸುಶ್ಮಿತಾ ಎ ಕಾರ್ಯಕ್ರಮ ನಿರೂಪಿಸಿದರು.