ಉಡುಪಿ: ನೆರೆ ಪ್ರವಾಹದಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡ ಮತ್ತು ಭಾಗಶಃ ಹಾನಿಗೊಳಗಾದ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ಮನೆ ಪುನರ್ ನಿರ್ಮಾಣದ ಆದೇಶ ಪ್ರತಿ ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ಅನ್ನು ಶಾಸಕ ಕೆ. ರಘುಪತಿ ಭಟ್ ಸೋಮವಾರ ಉಡುಪಿ ತಾ.ಪಂ. ಸಭಾಂಗಣದಲ್ಲಿ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆಯ ಮೂಲಕ ಹೆಣ್ಣು ಮಗುವಿನ ಹೆಸರಿನಲ್ಲಿ 19,300 ರೂ. ಎಲ್‌ಐಸಿ ಪಾಲಿಸಿ ಮಾಡಿಸುತ್ತಿದ್ದು, ಮಗುವಿಗೆ 18 ವರ್ಷ ತುಂಬಿದ ಬಳಿಕ ಇದರಿಂದ 1 ಲಕ್ಷ ರೂ. ಲಭಿಸುತ್ತದೆ. ಅದೇ ರೀತಿ ಪೋಷಕರು ಕೂಡ ಹೆಣ್ಣು ಮಕ್ಕಳ ಭವಿಷ್ಯದ ಭದ್ರತೆಯ ದೃಷ್ಠಿಯಿಂದ ವಿವಿಧ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಇದು ಹೆಣ್ಣುಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.
ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂದರ್ಭದಲ್ಲಿ ಎಲ್ಲವನ್ನು ಕಾನೂನು ದೃಷ್ಠಿಯಿಂದ ನೋಡಬಾರದು. ಮಾನವೀಯ ನೆಲೆಯಲ್ಲಿಯೂ ಪರಿಹಾರ ವಿತರಣೆಗೆ ಅಧಿಕಾರಿಗಳು ಮುಂದಾಗಬೇಕು. ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿ ತಕ್ಷಣ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಪಾಕೃತಿಕ ವಿಕೋಪದಡಿ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಕಾಮಗಾರಿಗೆ ಅನುಗುಣವಾಗಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಶೇ. 25ಕ್ಕಿಂತಲೂ ಹೆಚ್ಚು ಹಾನಿ ಸಂಭವಿಸಿದ ಮನೆಯವರಿಗೆ 1 ಲಕ್ಷ ರೂ. ಹಾಗೂ ಶೇ. 25ಕ್ಕಿಂತ ಕಡಿಮೆ ಹಾನಿ ಸಂಭವಿಸಿದ ಫಲಾನುಭವಿಗಳಿಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಅಲ್ಲದೆ, ಸರ್ಕಾರವು ಸಂಪೂರ್ಣವಾಗಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಪ್ರತಿ ತಿಂಗಳು 5 ಸಾವಿರದಂತೆ 10 ತಿಂಗಳವರೆಗೆ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಬಾಡಿಗೆ ಮಂಜೂರು ಮಾಡಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಬೈಲಕೆರೆ, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಸದಸ್ಯರಾದ ನಳಿನಿ ಪ್ರದೀಪ್ ರಾವ್, ಡಾ. ಸುನೀತಾ ಶೆಟ್ಟಿ, ವಸಂತಿ ಪೂಜಾರಿ, ಗೋಪಿ ಕೆ. ನಾಯ್ಕ್, ದಿನಕರ ಹೇರೂರು, ತಾಪಂ ಇಒ ಕೇಶವ ಶೆಟ್ಟಿ, ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ಮೊದಲಾದವರು ಉಪಸ್ಥಿತರಿದ್ದರು.
76 ಮಂದಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ:
ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ 76 ಮಂದಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ಮತ್ತು ನೆರೆ ಪ್ರವಾಹದಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡ 12 ಮಂದಿಗೆ ತಲಾ 5 ಲಕ್ಷ ರೂ. ಮನೆ ನಿರ್ಮಾಣ ಕಾಮಗಾರಿಯ ಆದೇಶ ಪ್ರತಿ, ಶೇ. 25ಕ್ಕಿಂತ ಹೆಚ್ಚು ನಷ್ಟ ಸಂಭವಿಸಿದ 16 ಮಂದಿಗೆ ತಲಾ 1 ಲಕ್ಷ ಹಾಗೂ ಶೇ. 25ಕ್ಕಿಂತ ಕಡಿಮೆ ಹಾನಿ ಸಂಭವಿಸಿದ 36 ಸಂತ್ರಸ್ತ ಫಲಾನುಭವಿಗಳಿಗೆ ತಲಾ 25 ಸಾವಿರ ರೂ. ಚೆಕ್ ವಿತರಣೆ ಮಾಡಲಾಯಿತು.