ಉಡುಪಿ: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ನೇತೃತ್ವದಲ್ಲಿ 13 ವರ್ಷದೊಳಗಿನ ಬಾಲಕ–ಬಾಲಕಿಯರ ಅಖಿಲ ಭಾರತ ಸಬ್ ಜ್ಯೂನಿಯರ್ ರ್ಯಾಂಕಿಂಗ್ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್–2019 ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣ ಹಾಗೂ ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ಜು. 2ರಿಂದ 7ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೂರ್ನಿಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವ ಆಟಗಾರರು ಸಹಿತ ವಿವಿಧ ರಾಜ್ಯಗಳ ಅಗ್ರ ಶ್ರೇಯಂಕಿತ 1 ಸಾವಿರ ಆಟಗಾರರು ಭಾಗವಹಿಸುವರು. ಜತೆಗೆ 50 ಜನ ತೀರ್ಪುಗಾರರು ಭಾಗವಹಿಸಲಿದ್ದು, ಈ ಸ್ಪರ್ಧೆ ಒಟ್ಟು 3.50 ಲಕ್ಷ ಮೊತ್ತದ ಪ್ರಶಸ್ತಿಯನ್ನು ಒಳಗೊಂಡಿದೆ. ಟೂರ್ನಿಯಲ್ಲಿ ಸ್ಪರ್ಧಿಸುವ ಆಟಗಾರರಿಗೆ ಉಚಿತ ಊಟ, ಉಪಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 43.63 ಲಕ್ಷ ವೆಚ್ಚದಲ್ಲಿ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್, ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹಭಾಗಿತ್ವದಲ್ಲಿ ಟೂರ್ನಿ ಆಯೋಜಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಟೂರ್ನಮೆಂಟ್ ಆಯೋಜನಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಎಂ. ಕಾಶೀರಾಮ್ ಪೈ, ಸಂಚಾಲಕ ಸೊಹೈಲ್ ಅಮಿನ್, ಜಂಟಿ ಕಾರ್ಯದರ್ಶಿಗಳಾದ ಅರುಣ್ ಎನ್. ಶೇರಿಗಾರ್, ಸಂದೀಪ್ ನಾಯಕ್ ಉಪಸ್ಥಿತರಿದ್ದರು.












