ಉಡುಪಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಂಧನವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜೋಡುಕಟ್ಟೆಯಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಪಿತೂರಿಯಿಂದ ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದಲೇ ಕೇಂದ್ರ ಸರ್ಕಾರ ಡಿಕೆಶಿ ಅವರ ಮೇಲೆ ಹಗೆತನ ಸಾಧಿಸುತ್ತಾ ಬಂದಿದೆ. ಅವರಿಗೆ ನಿರಂತರ ಕಿರುಕುಳ ನೀಡುತ್ತಿದೆ.
ಇಡಿ, ಐಟಿಯಂತಹ ತನಿಖಾ ಸಂಸ್ಥೆಗಳ ವಿಚಾರಣೆಗೆ ಎಲ್ಲ ರೀತಿಯ ಸಹಕಾರ ನೀಡಿದರೂ ಸಹ ಡಿಕೆಶಿ ಅವರನ್ನು ಬಂಧನ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ದೂರಿದರು.
ಇಂದು ಬಿಜೆಪಿ ಕಾಂಗ್ರೆಸ್ ಮುಕ್ತ ದೇಶ ಕಟ್ಟಲು ಹೊರಟಿದ್ದು, ಅದಕ್ಕಾಗಿ ಸಿಬಿಐ, ಇಡಿ, ಐಟಿ ಹಾಗೂ ಚುನಾವಣಾ ಆಯೋಗದಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಹೆಣೆಯುವ ಕಾರ್ಯಕ್ಕೆ ಕೈಹಾಕಿದೆ. ಬೇರೆ ಬೇರೆ ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಸಾಗಿದೆ. ಪ್ರಜಾಪ್ರಭುತ್ವದ ಅಸ್ಥಿತ್ವವನ್ನೇ ಬುಡಮೇಲು ಮಾಡುವ ನಿಟ್ಟಿನಲ್ಲಿ ಬಿಜೆಪಿಯ ಪ್ರಯತ್ನ ಮುಂದುವರಿದಿದೆ ಎಂದರು.
ಮಾಜಿ ಶಾಸಕ ಯು.ಆರ್. ಸಭಾಪತಿ ಮಾತನಾಡಿ, ಇಡಿ, ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಚಾರದ ಆರೋಪದಲ್ಲಿ ಯಡಿಯೂರಪ್ಪನವರು ಜೈಲಿಗೆ ಹೋಗಿದ್ದರು. 20 ದಿನ ಜೈಲಿನಲ್ಲಿ ಇದ್ದರು. ಈಗ ಆ ಪ್ರಕರಣ ಏನಾಯಿತು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ತಮ್ಮ ಪಕ್ಷದ ನಾಯಕರ ಮೇಲಿನ ಪ್ರಕರಣವನ್ನು ಕೈಬಿಟ್ಟು, ವಿರೋಧ ಪಕ್ಷದ ನಾಯಕರ ಮೇಲೆ ಹಗೆತನದ ರಾಜಕಾರಣ ಮಾಡುತ್ತಿದೆ. ಇದರಿಂದ ಸಂವಿಧಾನ ಬಿಕ್ಕಟ್ಟು ಉಂಟಾದರೂ ಅಚ್ಚರಿ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಮೀತಿಮೀರಿದ್ದು, ವಾಮ ಮಾರ್ಗದ ಮೂಲಕ ಕಾಂಗ್ರೆಸ್ ನಾಯಕರನ್ನು ಮಟ್ಟಹಾಕಲು ಮುಂದಾಗಿದೆ. ಬಿಜೆಪಿಯ ಕೆಳಮಟ್ಟದ ರಾಜಕಾರಣಕ್ಕೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಅರ್ಧ ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಬಿಜೆಪಿ ಸರ್ಕಾರ ಹಾಗೂ ಇಡಿ, ಐಟಿ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಯತೀಶ್ ಕರ್ಕೇರ, ಡಾ. ಸುನೀತಾ ಶೆಟ್ಟಿ, ಶಿವಾಜಿ ಸುವರ್ಣ, ಗೀತಾ ವಾಗ್ಲೆ, ವೆರೋನಿಕಾ ಕರ್ನೇಲಿಯೊ, ರೋಶನಿ ಒಲಿವೆರಾ, ನಾರಾಯಣ ಕುಂದರ್, ಮೀನಾಕ್ಷಿ ಬನ್ನಂಜೆ, ದಿವಾಕರ ಕುಂದರ್, ಇಸ್ಮಾಯಿಲ್ ಆತ್ರಾಡಿ, ದಿನೇಶ್ ಕೋಟ್ಯಾನ್, ಭಾಸ್ಕರ್ ರಾವ್ ಕಿದಿಯೂರು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.