“ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗ ಮೇಳ ಸಹಕಾರಿ”

ಉಡುಪಿ: ದೇಶದ ಜ್ವಲಂತ ಸಮಸ್ಯೆಯಾಗಿ ಗುರುತಿಸಿಕೊಂಡಿರುವ ನಿರುದ್ಯೋಗ ಸಮಸ್ಯೆಯನ್ನುಪರಿಹರಿಸುವಲ್ಲಿ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳು ಮಹತ್ತರವಾದ ಪಾತ್ರವನ್ನುನಿಭಾಯಿಸುತ್ತವೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದರು.ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಂಚಲನ ಟ್ರಸ್ಟ್‌ ಉಡುಪಿ, ಯುವಸಬಲೀಕರಣಮತ್ತು ಕ್ರೀಡಾ ಇಲಾಖೆ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ, ಡಾ.ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಉಡುಪಿ ಉದ್ಯೋಗ ಮೇಳ 2019 ಇದರ ಅಭ್ಯರ್ಥಿಗಳ ತರಬೇತಿ ಕಾರ್ಯಾಗಾರ ಹಾಗೂ ಸ್ವ ಉದ್ಯೋಗ ಮತ್ತು ಉದ್ಯಮಶೀಲತೆ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ,

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಪೂರ್ವವಾದ ಪ್ರತಿಭೆ ಅಡಗಿದೆ. ಅದನ್ನು ಹೊರತರಲು ಇಂಥಾ ಮುಕ್ತ ವೇದಿಕೆಗಳನ್ನು ಬಳಸಿಕೊಳ್ಳಬೇಕು. ತಮ್ಮ ವ್ಯಕ್ತಿತ್ವವನ್ನು ತಾವೇ ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂದರು. ಅಜ್ಜರಕಾಡು ಡಾ. ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಕೆ. ಭಾಸ್ಕರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ, ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್‌,ಉಡುಪಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯಕ್ಷ ಡಾ. ಉಮೇಶ್‌ ಪ್ರಭು ಉಪಸ್ಥಿತರಿದ್ದರು.ಪತ್ರಕರ್ತ ಶ್ರೀಕಾಂತ್‌ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಯುವ ಸಬಲೀಕರಣ ಇಲಾಖೆಯಸಹಾಯಕ ನಿರ್ದೇಶಕ ಡಾ. ರೋಶನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಸಂಚಲನ ಟ್ರಸ್ಟ್‌ ಸಂಚಾಲಕ ಪ್ರೇಮ್‌ ಪ್ರಸಾದ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜೇತಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.