ಜ್ಞಾನಸುಧಾ ಸಂಸ್ಥೆಗೆ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಶಕ್ತಿಯಿದೆ- ಸಂಸದ ಕೋಟ

ಉಡುಪಿ: ಜಾತಿ, ಧರ್ಮಕ್ಕಿಂತ ದೇಶ ಮೊದಲು ಎಂಬ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡಬೇಕೆಂಬ ಹಿರಿಯರ ಕನಸನ್ನು ನನಸು ಮಾಡುವ ಶಕ್ತಿ ಜ್ಞಾನಸುಧಾ ಸಂಸ್ಥೆಗಿದೆ. ಈ ನಿಟ್ಟಿನಲ್ಲಿ ಸುಧಾಕರ ಶೆಟ್ಟಿ ಮತ್ತು ತಂಡದವರ ಪರಿಶ್ರಮ ಸಾರ್ಥಕತೆಯ ಕಡೆಗೆ ಸಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಭಾರತ ಸಮೃದ್ಧ ದೇಶವಾಗಿ ರೂಪುಗೊಳ್ಳುತ್ತಿದೆ. ಶಕ್ತಿ, ಸ್ವಾಭಿಮಾನದ ಭಾರತವಾಗಿ ಬೆಳೆದುನಿಂತಿದೆ. ಈ ಭಾರತದಲ್ಲಿ‌ ಮುಂದಿನ ರಾಷ್ಟ್ರಪ್ರೇಮಿಗಳಾಗಿ ಯುವಪೀಳಿಗೆ ಮೇಲೆದ್ದು ಬರುವ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು.

ರಾಜ್ಯ ಸರಕಾರದ ಮಾಹಿತಿ ಪ್ರಕಾರ ಈ ವರ್ಷ ಮಕ್ಕಳಿಲ್ಲದ ಕಾರಣ ಏಳು ಸಾವಿರ ಶಾಲೆಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಇದರ ನಡುವೆ ಜ್ಞಾನಸುಧಾ ಕಾಲೇಜಿನಲ್ಲಿ ನನ್ನ ಮಗನಿಗೊಂದು ಸೀಟು ಕೊಡಿಸಿಯೆಂದು ಬಂದ ಹೆತ್ತವರನ್ನು ನೋಡಿದಾಗ ಈ ಜ್ಞಾನಸುಧಾ ಸಂಸ್ಥೆಯು ಯಾವ ಎತ್ತರಕ್ಕೆ ಬೆಳೆಯುತ್ತಿದೆ ಎಂಬ ಆಶ್ಚರ್ಯದ ಜೊತೆ ಸಂತೋಷ, ಅಭಿಮಾನ ಉಂಟಾಗುತ್ತದೆ ಎಂದು ಶ್ಲಾಘಿಸಿದರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸರಳತೆಯಲ್ಲಿ ಭಗವಂತನನ್ನು ಕಾಣಲು ಸಾಧ್ಯವಿದೆ. ಅದು ನಮ್ಮನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸರಳತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ತಂದೆ- ತಾಯಿ ಎಂಬ ಸುಂದರ ಮೌಲ್ಯಗಳನ್ನು ಪ್ರೀತಿಸಿ, ಅವರನ್ನು ಯಾವತ್ತೂ ಕಣ್ಣೀರು ಹಾಕಿಸುವಂತೆ ಮಾಡಬೇಡಿ. ದೇಶವನ್ನು ಪ್ರೀತಿಸಿ, ನಾನು ನನ್ನದು ಎಂಬ ಸ್ವಾರ್ಥವನ್ನು ಬಿಡಿ. ಸಮಾಜದಲ್ಲಿ ಡ್ರಗ್ಸ್ ಹಾವಳಿ ಜೋರು ಇದೆ‌. ಆ ವ್ಯವಹಾರ ಮಾಡುತ್ತಿರುವವರು ನಿಮ್ಮನ್ನು ಟೂಲ್ ಕಿಟ್ ಆಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಬಲಿಯಾಗಿ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ಮೌಲ್ಯಗಳನ್ನು ಅವಳಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಣಿಪಾಲ್ ಗ್ರೂಪ್ ಚೇರ್ಮನ್ ಟಿ. ಸುಧಾಕರ್ ಪೈ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಆದರ್ಶ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜಿ.ಎಸ್. ಚಂದ್ರಶೇಖರ್ ಮಾತನಾಡಿದರು.ಕೆನರಾ ಕನ್ಸೂಮರ್ ಪ್ರೊಡೆಕ್ಟ್ ಲಿ. ನಿರ್ದೇಶಕಿ ಜಯ ಸುಧಾಕರ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು‌.

ಈ ಸಂದರ್ಭಗಳಲ್ಲಿ ಸಂಸ್ಥೆಗಳಿಂದ ಎಂ.ಬಿ.ಬಿ.ಎಸ್ ಪ್ರವೇಶ ಪಡೆದ 227 ವಿದ್ಯಾರ್ಥಿಗಳು, ಜೆ.ಇ.ಇ ಅಡ್ವಾನ್ಸ್ ಹಾಗೂ ಜೆ.ಇ.ಇ ಮೈನ್ ಮೂಲಕ ಐ.ಐ.ಟಿ, ಐ.ಐ.ಎಸ್.ಸಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಎನ್.ಐ.ಟಿ ಪ್ರವೇಶ ಪಡೆದ ಹನ್ನೆರಡು ವಿದ್ಯಾರ್ಥಿಗಳು, ಕೆ.ಸಿ.ಇ.ಟಿ ಇಂಜಿನಿಯರ್‌ನಲ್ಲಿ ಒಂದು ಸಾವಿರದೊಳಗಿನ ರ‍್ಯಾಂಕ್ ಪಡೆದ ನಲವತ್ತೊಂದು ವಿದ್ಯಾರ್ಥಿಗಳು, ರಾಷ್ಟ್ರಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳು, ಸಿ.ಎ. ಫೌಂಡೇಶನ್ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಗೂ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಪೂರ್ವ ವಿದ್ಯಾರ್ಥಿಗಳು ಹಾಗೂ ಎನ್.ಡಿ.ಎ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಾಗೆಯೇ 227 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಪರವಾಗಿ ಪ್ರತಿ ವಿದ್ಯಾರ್ಥಿಗೆ 2 ಸಾವಿರದಂತೆ 4ಲಕ್ಷದ 54 ಸಾವಿರ ರೂ.ಗಳನ್ನು ಭಾರತೀಯ ಸೇನೆಗೆ ನೀಡಲಾಯಿತು.