ಉಡುಪಿ ಏ18: ಜಿಲ್ಲೆಯ ಯಾವುದೇ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ತೀವ್ರ ಉಸಿರಾಟ ತೊಂದರೆ , ಜ್ವರ ಮತ್ತು ಶೀತ ಕೆಮ್ಮು ಇರುವ ರೋಗಿಗಳು ಕಂಡುಬಂದಲ್ಲಿ ಅವರ ವಿವರಗಳನ್ನು ಜಿಲ್ಲಾಡಳಿತಕ್ಕೆ ನೀಡುವಂತೆ , ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳ ವೈದ್ಯರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಶನಿವಾರ, ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ , ಕೋವಿಡ್ -19 ನಿಯಂತ್ರಣ ಕುರಿತಂತೆ ರಚಿಸಲಾಗಿರುವ ಜಿಲ್ಲಾ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ದಾಖಲಾಗಿದ್ದ 3 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಗುಣಮುಖರಾಗಿ ತೆರಳಿದ್ದು, ಜಿಲ್ಲೆಯ ಒಳಗೆ ಇನ್ನು ಕೊರೋನ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಆದ್ದರಿಂದ ಜಲ್ಲೆಯ ಗಡಿಗಳನ್ನು ಈಗಾಗಲೇ ಸೀಲ್ ಮಾಡಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ , ತುರ್ತು ವೈದ್ಯಕೀಯ ಪ್ರಕರಣಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ, ಮುಂಜಾಗ್ರತೆಯಾಗಿ ಜಿಲ್ಲೆಯಲ್ಲಿ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ತೀವ್ರ ಉಸಿರಾಟ ತೊಂದರೆ ಮತ್ತು ಶೀತ ಕೆಮ್ಮು ಇರುವ ರೋಗಿಗಳು ಚಿಕಿತ್ಸೆಗಾಗಿ ಬಂದಲ್ಲಿ , ಅವರ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಂಡು ಜಿಲ್ಲಾಡಳಿತಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಂದು ವೇಳೆ ಪಾಸಿಟಿವ್ ಪ್ರಕರಣ ಕಂಡು ಬಂದಲ್ಲಿ, ರೋಗಿಯನ್ನು ಸಾವಿನಿಂದ ಪಾರು ಮಾಡುವುದು ತಜ್ಷರ ಕಮಿಟಿಯ ಪ್ರಮುಖ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪಾಸಿಟಿವ್ ಕಂಡು ಬಂದ ತಕ್ಷಣದಿಂದ ಎಲ್ಲಾ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯೊಳಗೆ ವೈದ್ಯಕೀಯ ಪ್ರವೇಶ ತುರ್ತು ಚಿಕಿತ್ಸೆಗಾಗಿ ಬರುವ ಹೊರ ಜಿಲ್ಲೆಯ ರೋಗಿಗಳು , ತಮಗೆ ಕೋವಿಡ್-19 ನ ಲಕ್ಷಣಗಳು ಇಲ್ಲ ಎಂಬುದರ ಬಗ್ಗೆ ಜಿಲ್ಲೆಯ ಡಿ.ಹೆಚ್.ಓ ಅಥವಾ ಟಿ.ಹೆಚ್.ಓ ಮೂಲಕ ದೃಢಪತ್ರ ಪಡೆದುಕೊಂಡು ಬರುವ ಕುರಿತಂತೆ ತಜ್ಞರ ಸಮಿತಿ ತೀರ್ಮಾನಿಸಿತು. ಈ ಕುರಿತಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಜಿಲ್ಲಾದಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಗೆ ಆಗಮಿಸುವ ಹೊರ ಜಿಲ್ಲೆಗಳ ರೋಗಿಗಳಿಗೆ ಅನಿವಾರ್ಯವಾಗಿ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ , ಉಡುಪಿ ಜಿಲ್ಲೆಯ ಸಂಬಂಧಪಟ್ಟ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಆಗಮಿಸಲು ಸೂಚನೆ ನೀಡುವಂತೆ ಹಾಗೂ ತೀವ್ರವಲ್ಲದ ಚಿಕಿತ್ಸೆಗೆ ಜಿಲ್ಲೆಗೆ ಆಗಮಿಸಲು ಅನುಮತಿ ನೀಡದಂತೆ ತಜ್ಞರ ಸಮಿತಿ ತೀರ್ಮಾನಿಸಿತು.
ಮಣಿಪಾಲದದಲ್ಲಿ ಲಾಕ್ಡೌನ್ ಆದಾಗಿನಿಂದ 1000 ಮಂದಿ ಹೊರ ಜಿಲ್ಲೆಯ ರೋಗಿಗಳಿಗೆ ಮಾತ್ರ ಚಿಕಿತ್ಸೆಗೆ ಬರಲು ಅನುಮತಿ ನೀಡಿದ್ದು, ಇತರೆ ಸಮಯದಲ್ಲಿ ಮಣಿಪಾಲಕ್ಕೆ ಆಗಮಿಸುವ ರೋಗಿಗಳ ಸಂಖ್ಯೆ ಸುಮಾರು 15 ರಿಂದ 20 ಸಾವಿರ ಇರುತ್ತಿತ್ತು ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು.
ಹೊರ ಜಿಲ್ಲೆಗಳ ರೋಗಿಗಳೊಂದಿಗೆ ಚಿಕಿತ್ಸೆಗೆ ಆಗಮಿಸಲು, ರೋಗಿಯ ಜೊತೆಗೆ ಬರುವ ಸಹಾಯಕರ ಸಂಖ್ಯೆಯನ್ನು ನಿಯಮಿತಗೊಳಿಸುವ ಬಗ್ಗೆ ಚರ್ಚೆ ನಡೆಯಿತು, ರೋಗಿಯು ಚಿಕಿತ್ಸೆಗೆ ಬರಲು ಅನುಮತಿ ನೀಡಿದಲ್ಲಿ ಆತನ ವಿವರಗಳನ್ನು ನೀಡಿದಲ್ಲಿ , ಚೆಕ್ಪೋಸ್ಟ್ ನಲ್ಲಿ ತಪಾಸಣೆ ಮಾಡಲು ಸಹಾಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್,ಅಪರ ಜಿಲ್ಲಾಧಿಕರಿ ಸದಾಶಿವ ಪ್ರಭು , ಡಿಹೆಚ್ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ವಾಸುದೇವ ಉಪಾಧ್ಯಾಯ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ. ಚಂದ್ರಶೇಖರ್, ಕೆಎಂಸಿ ಯ ವಿವಿಧ ವೈದ್ಯರು ಮತ್ತಿತರರು ಉಪಸ್ಥಿತರಿದ್ದರು.