ಉಡುಪಿ: ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಜತೆಗೆ ದೇಶದ ಬಗ್ಗೆಯೂ ಚಿಂತನೆ ಮಾಡಬೇಕು. ಜತೆಗೆ ಬಡ ಸಹಪಾಠಿಗೆ ನೆರವು ಒದಗಿಸುವ ಮನೋಧರ್ಮವನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದು ಶೃಂಗೇರಿ ಗೌರಿಗದ್ದೆಯ ಸ್ವರ್ಣ ಪೀಠಿಕಪುರ ದತ್ತಾಶ್ರಮದ ವಿನಯ ಗುರೂಜಿ ಹೇಳಿದರು.
ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಉಡುಪಿ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಸ್ತುತ ಸಾಲಿನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಬೆನ್ನೆಲುಬು. ವಿದ್ಯಾರ್ಥಿ ಶಕ್ತಿಗಿಂತ ದೊಡ್ಡ ಶಕ್ತಿ ಬೇರೊಂದಿಲ್ಲ ಎಂದರು.
ವಿದ್ಯಾರ್ಥಿಗಳು ಹಬ್ಬ ಸೇರಿದಂತೆ ವಿವಿಧ ಆಚರಣೆಗಳ ಜತೆಗೆ ಗಿಡ ನೆಡುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಶುದ್ಧ ನೀರು ಉಳಿಸುವ ನಿಟ್ಟಿನಲ್ಲಿ ದೇಶದ ಜೀವನಾಡಿಯಾಗಿರುವ ನದಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಶ್ಯಾಮಲಾ ಕುಂದರ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸ್ಥಾಪಕ ದಿನಕರ ಶೆಟ್ಟಿ, ರಾಜ್ಯಾಧ್ಯಕ್ಷ ಅಶ್ವಥ್ ಕೊಠಾರಿ, ಬಿಜೆಪಿ ಮುಖಂಡ ಬೇಲೂರು ರಾಘವೇಂದ್ರ ಶೆಟ್ಟಿ, ಸಮಾಜ ಸೇವಕ ರಮೇಶ್ ಕಲ್ಲೋಟೆ ಮಾತನಾಡಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ಗಣೇಶ್ ಸಾಲಿಯಾನ್, ಹರೀಶ್ ಶೆಟ್ಟಿ, ಪ್ರಶಾಂತ್ ಸುವರ್ಣ, ಪ್ರಮುಖರಾದ ಹರೀಶ್ ತೋಳಾರ್, ಸುಭಾಶ್ ಪೂಜಾರಿ, ಸತೀಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಗೌರವ ಸಲಹೆಗಾರ ವಿವೇಕ ಜಿ. ಸುವರ್ಣ ಸ್ವಾಗತಿಸಿದರು. ಸಂಚಾಲಕ ರಾಮಾಂಜಿ ಪ್ರಾಸ್ತಾವನೆಗೈದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.