ಉಡುಪಿ: ಸರಕಾರ ಜಾರಿಗೊಳಿಸುವ ಹೊಸ ಹೊಸ ಕಾಯ್ದೆ ಹಾಗೂ ವಿವಿಧ ತೆರಿಗೆ ಸಹಕಾರಿ ಕ್ಷೇತ್ರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಎಲ್ಲ ಸಹಕಾರಿಗಳು ಸಂಘಟಿತರಾಗಿ ಸಮಸ್ಯೆಯ ವಿರುದ್ಧ ಹೋರಾಡಬೇಕು. ಆಗ ಮಾತ್ರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರಿ ಯೂನಿಯನ್, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಸಹಕಾರಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಕೃಷಿ ಪತ್ತಿನ ಹಾಗೂ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶುಕ್ರವಾರ ನಗರದ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಇರುವ ಸಹಕಾರಿ ಸಂಘಗಳ ಬ್ಯಾಂಕ್ ಖಾತೆಗಳನ್ನು ಮುಚ್ಚುವುದಾಗಿ ಆರ್ಬಿಐ ಸುತ್ತೋಲೆ ಹೊರಡಿಸಿದೆ. ಸಹಕಾರಿಗಳಿಗೆ ಸಾಲ ವಸೂಲಾತಿ ಹಾಗೂ ನಿರ್ವಹಣೆ ಅತ್ಯಂತ ಕಷ್ಟದ ಕೆಲಸವಾಗಿದ್ದು, ಅದರ ಮೇಲೆ ಹೊಸ ಕಾಯ್ದೆ, ಕಾನೂನುಗಳು ಇನ್ನಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿ, ಸಹಕಾರಿ ಸಂಘಗಳು ಸೌರಶಕ್ತಿ ಉಪಕರಣ ಖರೀದಿಗೆ ಸಾಲ ನೀಡಬೇಕು. ಆ ಮೂಲಕ ಗ್ರಾಮೀಣ ಭಾಗದಲ್ಲಿ ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಕುಂದಾಪುರ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಎಂ.ಜೆ. ಚಂದ್ರಪ್ರತಿಮಾ, ಭಾರತೀಯ ವಿಕಾಸ ಟ್ರಸ್ಟ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಮನೋಹರ್, ಎಸ್ಡಿಸಿಸಿ ಬ್ಯಾಂಕ್ ನಿವೃತ್ತ ಸಿಇಓ ವಿಶ್ವನಾಥ್ ನಾಯರ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ್ ಪೂಜಾರಿ, ಹರೀಶ್ ಕಿಣಿ, ಎಂ. ಗೋಪಿಕೃಷ್ಣ ರಾವ್ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರಿ ಯೂನಿಯನ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.