ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಸೇವೆ ಮಹತ್ತರವಾದುದು: ಜಿ. ಜಗದೀಶ್ 

ಉಡುಪಿ: ವಿಶೇಷ ಮಕ್ಕಳ ಶಾಲೆಯನ್ನು ನಿರ್ವಹಿಸುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಬಹಳ‌ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಸೇವೆ ಮಹತ್ತರವಾದುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.
ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಕುಂದಾಪುರ ಅಂಪಾರಿನ ವಾಗ್ಜೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯ ಸಹಯೋಗದಲ್ಲಿ ಶನಿವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ ಜಿಲ್ಲಾಮಟ್ಟದ ವಿಶೇಷ ಮಕ್ಕಳ ಸಾಂಸ್ಕೃತಿಕ ಹಬ್ಬ ‘ಹೊಂಗಿರಣ–2109’ವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್‌ ಮಾತನಾಡಿ, ವಿಶೇಷ ಮಕ್ಕಳು ಮತ್ತು ಸಾಮಾನ್ಯ ಮಕ್ಕಳ ನಡುವೆ ಯಾವುದೇ ತಾರತಮ್ಯ ಮಾಡಬಾರದು. ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಬೆಳೆಸುವುದರ ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.
ವಿಶೇಷ ಮಕ್ಕಳನ್ನು ನೋಡಿಕೊಳ್ಳುವುದು ವಿಶೇಷ ಶಾಲೆಯ ಶಿಕ್ಷಕರ ದೊಡ್ಡ ಸೇವೆ ಆಗಿದೆ. ಆದರೆ ವಿಶೇಷ ಮಕ್ಕಳ ಶಿಕ್ಷಕರಿಗೆ ಕಳೆದ ಕೆಲವು ತಿಂಗಳಿನಿಂದ ವೇತನ ಸರಿಯಾಗಿ ಬರುತ್ತಿಲ್ಲ. ಬಂದರೂ ಸಹ ತೀರಾ ಕಡಿಮೆ ವೇತನ ನೀಡುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೂ ವೇತನ ಬಂದಿಲ್ಲ. ಹಾಗಾಗಿ ಶೀಘ್ರವೇ ವೇತನ ಜಾರಿಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್‌ ಆಫ್‌ ಬರೋಡ ಉಡುಪಿ ಪ್ರಾದೇಶಿಕ ಕಚೇರಿಯ ಮಹಾಪ್ರಬಂಧಕ ರವೀಂದ್ರ ರೈ, ಜಿಲ್ಲಾ ಮೊಗವೀರ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು. ಚಂದ್ರೇಶ್ವರ ಪಿತ್ರೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎನ್‌.ಕೆ. ಆನಂದ ವಂದಿಸಿದರು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಒಟ್ಟು 5 ವಿಶೇಷ ಮಕ್ಕಳ ಶಾಲೆಗಳು ಪಾಲ್ಗೊಂಡಿವೆ. ನೃತ್ಯ ಕಲಾವಿದೆ ಮಂಜರಿ ಚಂದ್ರ, ಅಮೃತಾ ಹಾಗೂ ಜಗದೀಶ್‌ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕೋಟ್‌ ವಿಶೇಷ ಮಕ್ಕಳಿಗೆ ಪ್ರೇರಣೆಯಾಗಲಿ:
ಸಾಮಾನ್ಯವಾಗಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗಲೂ ಕೋಟ್‌ ಧರಿಸುವುದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೆಂದರೆ ಹೀಗಿರುತ್ತಾರೆ ಎಂಬುದನ್ನು ವಿಶೇಷ ಮಕ್ಕಳು ನೋಡಿ ಅರ್ಥೈಸಿಕೊಳ್ಳಬೇಕು. ಆ ಕಾರಣಕ್ಕಾಗಿ ಕೋಟ್‌ ಧರಿಸಿಕೊಂಡು ಬಂದಿದ್ದೇನೆ. ಇದು ಮಕ್ಕಳಿಗೆ ಪ್ರೇರಣೆ ಆಗಬೇಕು. ಅವರಲ್ಲಿಯೂ ನಾನು ಜಿಲ್ಲಾಧಿಕಾರಿಯಾಗಬೇಕು. ಸಮಾಜ, ಜಿಲ್ಲೆ, ರಾಜ್ಯವನ್ನು ಮುನ್ನಡೆಸಬೇಕೆಂಬ ಮನೋಭಾವನೆ ಬೆಳೆಯಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.