ಉಡುಪಿ: ಬಿಲ್ಲವ ಮುಖಂಡ ಹಾಗೂ ಸಾಕಷ್ಟು ಅನುಭವ ಹೊಂದಿರುವ ಸಜ್ಜನ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಿ, ದ.ಕ. ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲು ಜಿಲ್ಲೆಯ ಐವರು ಶಾಸಕರ ಒತ್ತಡವೇ ಕಾರಣ ಎಂಬ ಗುಮಾನಿ ಇದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಕಲ್ಮಾಡಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಲು ಒತ್ತಡ ಹಾಕಿರುವ ಶಾಸಕರ ಮನೆಗೆ ತೆರಳಿ ಮನವಿ ಮಾಡುವ ಕೆಲಸ ಮಾಡಲಾಗುವುದು. ಇದಕ್ಕೆ ಒಪ್ಪದಿದ್ದರೆ ಮುಂದಿನ ನಡೆ ಬಗ್ಗೆ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದಲ್ಲಿ ಸೆ.19ರಂದು ಬಿಲ್ಲವರ ಎಲ್ಲ ಸಂಘಟನೆಯ ಪ್ರಮುಖ ಸೇರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಅವರು ಲಾಬಿ ಮಾಡದೆ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಅವರಿಗೆ ದ.ಕ. ಜಿಲ್ಲೆಯ ಉಸ್ತುವಾರಿ ನೀಡಿರುವುದು ಸರಿಯಲ್ಲ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಲ್ಲವರ ಅತ್ಯಂತ ಅಧಿಕ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಐವರು ಶಾಸಕರು ಬಿಲ್ಲವರ ಮತದಿಂದಲೇ ಗೆದ್ದಿದ್ದಾರೆ. ಹೀಗಾಗಿ ಬಿಲ್ಲವರ ಮನಸ್ಸಿಗೆ ನೋವು ಮಾಡದೆ ಶ್ರೀನಿವಾಸ ಪೂಜಾರಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಿರುವುದು ಜಿಲ್ಲೆಯ ಬಿಲ್ಲವ ಸಮಾಜಕ್ಕೆ ಮಾಡಿರುವ ಅವಮಾನ. ಶಾಸಕರನ್ನು ಬಿಟ್ಟು ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿರುವ ಕಾರಣಕ್ಕೆ ಜಿಲ್ಲೆಯ ಐದು ಶಾಸಕರು ಕೋಟಗೆ ಉಡುಪಿ ಉಸ್ತುವಾರಿಯನ್ನು ತಪ್ಪಿಸಿದ್ದಾರೆ. ಆದುದರಿಂದ ಶಾಸಕರುಗಳು ಮುಖ್ಯಮಂತ್ರಿಗೆ ಒತ್ತಡ ಹಾಕಿ ಕೋಟಗೆ ಉಡುಪಿ ಉಸ್ತುವಾರಿ ನೀಡುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಪರಿಷತ್ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ, ಮುಖಂಡರಾದ ಕಿರಣ್ ಕುಮಾರ್, ಸುಧಾಕರ ಪಾಂಗಾಳ ಉಪಸ್ಥಿತರಿದ್ದರು.