ಉಡುಪಿ: ಜಲಜೀವನ್ ಮಿಷನ್ ಕಾಮಗಾರಿ ಅವ್ಯವಸ್ಥೆ: ಕೃಷಿಕರಿಗೆ ಸಂಕಷ್ಟ – ಕೃತಕ ನೆರೆ ಸೃಷ್ಟಿ

ಉಡುಪಿ: ಹೊಸಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ರಾಪುರದ ಕಪ್ಪೆ ಹೊಂಡ ಪ್ರದೇಶದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಯ ಅವ್ಯವಸ್ಥೆಯಿಂದ ಸ್ಥಳೀಯ ಕೃಷಿಕರೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ.

ಕಾಮಗಾರಿ ವೇಳೆ ರಸ್ತೆ ಬದಿಯ ಚರಂಡಿಯನ್ನು ಮುಚ್ಚಿರುವ ಪರಿಣಾಮ ಮೊದಲ ಮಳೆಯಲ್ಲೇ ನೀರು ಕೃಷಿ ಭೂಮಿಗೆ ನುಗ್ಗಿ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಕೃಷಿಕ ಮಾಧವ ಭಂಡಾರಿ ಅವರ ತೋಟಕ್ಕೆ ಮಳೆನೀರು ಹರಿದು ಬಂದು ಭೂಮಿ ಜಲಾವೃತಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ರಸ್ತೆ ಬದಿಯ ಚರಂಡಿ ವ್ಯವಸ್ಥೆ ಸ್ಥಗಿತಗೊಂಡ ಕಾರಣ ಮಳೆನೀರು ಸಹಜವಾಗಿ ಹರಿದು ಹೋಗದೆ ನೇರವಾಗಿ ತೋಟದೊಳಗೆ ನುಗ್ಗುತ್ತಿದೆ ಎಂದು ಕೃಷಿಕ ಆರೋಪಿಸಿದ್ದಾರೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಆನಂದ ಕಾರೂರು ಅವರು ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರ ದೂರುಗಳ ನಡುವೆಯೂ ಸಮಸ್ಯೆ ಪರಿಹಾರಕ್ಕೆ ಮುಂದಾಗದ ಗ್ರಾಮ ಪಂಚಾಯಿತಿ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಕೃಷಿಕ ಮಾಧವ ಭಂಡಾರಿ ಅವರು ಸ್ವತಃ ಸಿಮೆಂಟ್ ಪೈಪ್‌ಗಳನ್ನು ಖರೀದಿಸಿ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಕಾಮಗಾರಿ ನಿರ್ವಹಿಸಿದ ಸಂಸ್ಥೆಗೆ ಮನವಿ ಮಾಡಿದ್ದರು. ಆದರೆ ಹಲವು ದಿನಗಳು ಕಳೆದರೂ ಸಂಸ್ಥೆ ಅಗತ್ಯ ಕಾಮಗಾರಿ ಕೈಗೊಳ್ಳದ ಕಾರಣ ಮಳೆನೀರು ತೋಟದಲ್ಲಿ ನಿಂತು ಕೃಷಿ ಭೂಮಿಗೆ ಹಾನಿ ಉಂಟುಮಾಡುತ್ತಿದೆ.

ಮೊದಲ ಮಳೆಯಲ್ಲೇ ಇಂತಹ ಸಮಸ್ಯೆ ಎದುರಾಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ವ್ಯಕ್ತವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಕೃಷಿಕರಿಗೆ ಆಗಿರುವ ನಷ್ಟವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.