ಉಡುಪಿ: ಇಲ್ಲಿನ ಕಲ್ಸಂಕ ಜಂಕ್ಷನ್ ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿ ಕಲ್ಲುಗಳೆಲ್ಲ ಕಿತ್ತುಹೋಗಿದ್ದು, ರಸ್ತೆಯ ಒಳಗಿದ್ದ ಕಬ್ಬಿಣದ ಸರಳುಗಳು ಮೇಲೆದ್ದು ಅಪಾಯವನ್ನು ಆಹ್ವಾನಿಸುತ್ತಿದೆ.
ಕಳಪೆ ಗುಣಮಟ್ಟದ ಕಾಮಗಾರಿಯೇ ಈ ರೀತಿಯ ಸಮಸ್ಯೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮುಖ್ಯ ರಸ್ತೆಯಲ್ಲಿ ನಸುಕಿನ ಜಾವ ವಾಯು ವಿಹಾರಿಗಳು, ಯಾತ್ರಿಕರು, ಪಾದಚಾರಿಗಳು, ಸಂಚರಿಸುತ್ತಾರೆ. ಕಬ್ವಿಣದ ಸರಳುಗಳು ಕಾಲಿಗೆ ತಾಗಿ ಪಾದಚಾರಿಗಳು ಎಡವಿಬಿದ್ದು ಗಾಯಾಳುಗಳಾದ ಘಟನೆಗಳು ನಡೆದಿವೆ. ಅಲ್ಲದೆ, ಅನೇಕ ವಾಹನಗಳ ಟಯರ್ ಕೂಡ ಪಂಚರ್ ಆಗಿವೆ.
ಹಾಗಾಗಿ ನಗರಸಭೆ ಕೂಡಲೇ ಎಚ್ಚೆತ್ತು ರಸ್ತೆಯ ದುರಸ್ತಿ ಮಾಡಬೇಕು. ಅಪಾಯ ಆಹ್ವಾನಿಸುತ್ತಿರುವ ಕಬ್ಬಿಣದ ಸರಳುಗಳನ್ನು ಕತ್ತರಿಸಬೇಕು ಎಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.












