ಉಡುಪಿ:ಮೇ 1ರಂದು ಉಡುಪಿ ಜಿಲ್ಲೆಯಾದ್ಯಂತ ವಿಶ್ವ ಕಾರ್ಮಿಕರ ದಿನಾಚರಣೆ

ಉಡುಪಿ: ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ, ಎಂಟು ಗಂಟೆ ಮನೊರಂಜನೆಗಾಗಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ಹೋರಾಟ ಜಗದಗಲ ಹರಡಿ ಕಾರ್ಮಿಕರನ್ನು ಶೋಷಣೆ ಯಿಂದ ವಿಮೋಚನೆಗೊಳಿಸಿ ಜಯ ಪಡೆದ ದಿನವನ್ನು ಜಗತ್ತಿನಾದ್ಯಂತ ಮೇ 1 ವಿಶ್ವ ಕಾರ್ಮಿಕರ ದಿನಾಚರಣೆಯಾಗಿ ಪ್ರತಿ ವರ್ಷ ನಡೆಸಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುವುದು.

ಉಡುಪಿ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಹಳೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯಿಂದ ಮೆರವಣಿಗೆ ಮೂಲಕ ತೆರಳಿ, ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ಬಹಿರಂಗ ಸಭೆ ನಡೆಸಲಾಗುವುದು. ಇದರಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜೆಸಿಟಿಯು ಜಿಲ್ಲಾ ಸಂಚಾಲಕ ಕವಿರಾಜ್ ಎಸ್.ಕಾಂಚನ್, ಇಂಟಕ್ ಕಿರಣ್ ಹೆಗ್ಡೆ, ಎಐಟಿಯುಸಿ ಯು.ಶಿವಾನಂದ ಹಾಗೂ ವಿಮಾ ನೌಕರರ ಸಂಘಟನೆಯ ಕೆ.ವಿಶ್ವನಾಥ್, ಬ್ಯಾಂಕ್ ನೌಕರರ ಸಂಘಟನೆಯ ನಾಗೇಶ್ ನಾಯಕ್ ಮಾತನಾಡಲಿದ್ದಾರೆ.ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಬೆಳಿಗ್ಗೆ 9.30ಕ್ಕೆ ಎಲ್ಲಾ ಗ್ರಾಮಗಳಿಂದ ಕಾರ್ಮಿಕರು ಆಗಮಿಸಿ ಮೆರವಣಿಗೆ ನಡೆಸಿ ಶಾಸ್ತ್ರೀ ಸರ್ಕಲ್‌ನಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಭೆಯನ್ನುದ್ದೇಶಿಸಿ ಎಚ್.ನರಸಿಂಹ, ಚಂದ್ರಶೇಖರ ವಿ. ಮೊದಲಾದವರು ಭಾಗವಹಿಸಲಿದ್ದಾರೆ.

ಬ್ರಹ್ಮಾವರದಲ್ಲಿ ಮಧ್ಯಾಹ್ನ 3 ಗಂಟೆಗೆ ಆಕಾಶವಾಣಿಯಿಂದ ಮೆರವಣಿಗೆ ಮೂಲಕ ತೆರಳಿ ಹಳೆ ಪೋಲಿಸ್ ಠಾಣೆ ಬಳಿ ಬಹಿರಂಗ ಸಭೆ ನಡೆಯಲಿದೆ. ಸಾಲಿಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಗೆ ಮೇ ದಿನಾಚರಣೆ ನಡೆಯಲಿದೆ. ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ ಶಂಕರ್, ಶಶಿಧರ ಗೊಲ್ಲ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಕಾರ್ಕಳದಲ್ಲಿ ಬಸ್ ನಿಲ್ದಾಣ ಬಳಿ ಬೆಳಿಗ್ಗೆ 10 ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು ಬಾಕೃಷ್ಣ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬೈಂದೂರು ಬೆಳಿಗ್ಗೆ 10 ಗಂಟೆಗೆ ಬೈಂದೂರು ಪೇಟೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ರಾಜೀವ ಪಡುಕೋಣೆ, ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮಾತನಾಡಲಿದ್ದಾರೆ ಎಂದು ಸಿಐಟಿಯು ಪ್ರಕಟಣೆ ತಿಳಿಸಿದೆ.