ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಅಂದರೆ ಕಟ್ಟಡಗಳ ಕಟ್ಟುವಿಕೆ ಮತ್ತು ಕೆಡಗುವಿಕೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದು ಪುರಸಭೆ ಅಧಿನಿಯಮ 1964 ಹಾಗೂ ಕನ್ಸ್ಟ್ರಕ್ಷನ್ ಅಂಡ್ ಡೆಮಾಲಿಷನ್ ವೇಸ್ಟ್ ರೂಲ್ಸ್ 2016 ರ ರೀತ್ಯಾ ದಂಡಕ್ಕೆ ಅರ್ಹವಾದ ಕೃತ್ಯವಾಗಿದ್ದು, ಸಾರ್ವಜನಿಕರು ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ ಎಸೆಯದೆ ಹಾಗೂ ದಿನನಿತ್ಯದ ತ್ಯಾಜ್ಯದೊಂದಿಗೆ ಮಿಶ್ರಣ ಮಾಡದೆ, ಕಟ್ಟಡಗಳ ಕಟ್ಟುವಿಕೆ ಮತ್ತು ಕೆಡಗುವಿಕೆ ತ್ಯಾಜ್ಯದ ಸೂಕ್ತ ವಿವೇವಾರಿಗೆ ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿ, ಕಟ್ಟಡ ಕೆಡಗುವಿಕೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡಿಸಿ, ಪಟ್ಟಣ ಪಂಚಾಯತ್‌ಗೆ ನೀಡಿ ಪಟ್ಟಣ
ಪಂಚಾಯತ್ ನಿಗಧಿಪಡಿಸಿದ ಶುಲ್ಕವನ್ನು ಪಾವತಿಸಬೇಕು.
ಸದರಿ ಆದೇಶವನ್ನು ಉಲ್ಲಂಘಿಸಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕ ಸ್ಥಳ ಅಥವಾ ರಸ್ತೆಗಳಲ್ಲಿ ಅನಧಿಕೃತವಾಗಿ ಕಟ್ಟಡಗಳ ಕಟ್ಟುವಿಕೆ ಮತ್ತು ಕೆಡಗುವಿಕೆ ತ್ಯಾಜ್ಯವನ್ನು ಸುರಿದಲ್ಲಿ ಪಟ್ಟಣ ಪಂಚಾಯತ್ ಬೈಲಾ ರೀತ್ಯಾ 10,000 ರೂ. ವರೆಗೆ ದಂಡ ವಿಧಿಸುವುದರೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ್ ಆರೋಗ್ಯ ವಿಭಾಗವನ್ನು ಸಂಪರ್ಕಿಸಬಹುದಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ
ಮುಖ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
















