ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶಾಸನೋಕ್ತ ಕಲಾತ್ಮಕ ದೀಪ ಪತ್ತೆ.

ಉಡುಪಿ: ತಾಲ್ಲೂಕಿನ ಪೆರ್ಡೂರಿನ ಅನಂತಪದ್ಮನಾಭ ದೇವಾಲಯದಲ್ಲಿ ಪುರಾಣೋಕ್ತ ಕಥಾನಕದ ನಿರೂಪಣಾ ಶಿಲ್ಪಗಳಿರುವ ಅಪರೂಪದ ದೀಪ ಪತ್ತೆಯಾಗಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಮುರುಗೇಶಿ ಟಿ. ತಿಳಿಸಿದ್ದಾರೆ.ದುಂಡನೆಯ ತಳವನ್ನು ಹೊಂದಿರುವ ದೀಪದ ಮೇಲ್ಭಾಗದಲ್ಲಿ ಕಮಾನಿನ ಆಕಾರದ ಕಲಾತ್ಮಕವಾದ ಫಲಕವಿದೆ. ಈ ಫಲಕದ ಎರಡೂ ಬದಿಗಳಲ್ಲಿ ಶೈವ ಮತ್ತು ವೈಷ್ಣವ ಪಂಥದ ಶಿಲ್ಪಗಳಿದ್ದು, ದೇವಾಲಯದ ಶೈವ ಮತ್ತು ವೈಷ್ಣವ ಪರಂಪರೆಯ ಅಪರೂಪದ ಪ್ರತೀಕವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೀಪದ ಮೊದಲ ಮುಖದ ಮಧ್ಯದಲ್ಲಿ ಕಾಲಪುರುಷನ ಮೇಲೆ ನಿಂತಿರುವ ನಟರಾಜನ ಶಿಲ್ಪವಿದೆ. ಎಡ-ಬಲದಲ್ಲಿ ನಗಾರಿಯನ್ನು ಬಾರಿಸುವ ಗಣಧಾರಿ ಹಾಗೂ ತಾಳವನ್ನು ನುಡಿಸುತ್ತಿರುವ ಭೃಂಗಿಯ ಶಿಲ್ಪಗಳಿವೆ. ಭೃಂಗಿಯ ಬಲಭಾಗದಲ್ಲಿ ಖಡ್ಗರಾವಣ ಮತ್ತು ಕುಮಾರ ಶಿಲ್ಪಗಳಿವೆ. ಖಡ್ಗ ರಾವಣ ಅರೆ ಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನನಾಗಿದ್ದಾನೆ ಎಂದಿದ್ದಾರೆ.

ಕುಮಾರ ಮಯೂರ ವಾಹನನಾಗಿದ್ದಾನೆ. ನಗಾರಿ ಬಾರಿಸುವ ಗಣಧಾರಿಯ ಎಡಕ್ಕೆ ನಂದಿವಾಹನೆ ಪಾರ್ವತಿ ಮತ್ತು ಮೂಷಕ ವಾಹನ ಗಣಪತಿಯ ಶಿಲ್ಪಗಳಿವೆ. ಈ ಶಿಲ್ಪಗಳು ಅತ್ಯಂತ ಸ್ಪಷ್ಟವಾಗಿ ಶಿವನ ಪ್ರಳಯ ತಾಂಡವ ಸನ್ನಿವೇಶವನ್ನು ಚಿತ್ರಿಸುತ್ತವೆ ಎಂದು ಹೇಳಿದ್ದಾರೆ.

ಎರಡನೇ ಮುಖದ ಮಧ್ಯದಲ್ಲಿ ಅನಂತಪದ್ಮನಾಭ ಸಮುಭಂಗಿಯಲ್ಲಿ ನಿಂತಿದ್ದಾನೆ. ಆತನ ಬಲಭಾಗದಲ್ಲಿ ಇಂದ್ರ ಮತ್ತು ಬ್ರಹ್ಮ ಹಾಗೂ ಎಡಭಾಗದಲ್ಲಿ ಅಗ್ನಿ ಮತ್ತು ವರುಣನ ಶಿಲ್ಪಗಳಿವೆ. ಅನಂತಪದ್ಮನಾಭ ತನ್ನ ಎರಡೂ ಕೈಗಳಲ್ಲಿ ಉದ್ಧರಣೆಯನ್ನು ಹಿಡಿದು ನಿಂತಂತೆ ಶಿಲ್ಪವನ್ನು ಚಿತ್ರಿಸಲಾಗಿದೆ. ಈ ಶಿಲ್ಪದ ಕೆಳಭಾಗದಲ್ಲಿ ನಿಂತಿರುವ ಗರುಡನ ಶಿಲ್ಪವಿದೆ. ಹಿಂಭಾಗದಲ್ಲಿ ಅಂಜಲೀ ಮುದ್ರೆಯಲ್ಲಿ ಕುಳಿತು ಶಾಂತವಾಗಿ ಅನಂತಪದ್ಮನಾಭನನ್ನು ಪ್ರಾರ್ಥಿಸುತ್ತಿರುವ ಶಿವನ ಶಿಲ್ಪವಿದೆ. ದೀಪದ ಎರಡೂ ಬದಿಗಳಲ್ಲಿ ತಲಾ ಎರಡು ಆಕರ್ಷಕವಾದ ಸಿಂಹಗಳ ಶಿಲ್ಪಗಳಿವೆ ಎಂದು ಅವರು ತಿಳಿಸಿದ್ದಾರೆ.

ದೇವಾಲಯದ ಒಳಪ್ರಾಕಾರದಲ್ಲಿ ಬಸವಣ್ಣರಸ ಬಂಗನ ಕ್ರಿ.ಶ. 1456ರ ಶಾಸನವಿದೆ. ಆ ಶಾಸನದಲ್ಲಿ, ಬಸವಣ್ಣರಸ ಬಂಗನು ದೇವಾಲಯಕ್ಕೆ ನೀಡಿದ ಎರಡು ಕಂಚಿನ ದೀಪದ ಉಲ್ಲೇಖವಿದೆ. ದೀಪದಲ್ಲಿರುವ ಶಿಲ್ಪದ ಲಕ್ಷಣಗಳು ಮತ್ತು ಶಾಸನದ ಉಲ್ಲೇಖದ ಆಧಾರದ ಮೇಲೆ ಈ ದೀಪದ ಕಾಲವನ್ನು 15ನೇ ಶತಮಾನದ ದೀಪವೆಂದು ನಿರ್ಣಯಿಸಲಾಗಿದೆ ಎಂದು ಹೇಳಿದ್ದಾರೆ.

ದೇವಾಲಯದ ಆಡಳಿತ ಮಂಡಳಿಯ ಆನುವಂಶಿಕ ಮೊಕ್ತೇಸರ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್, ಆದಿಮ ಕಲಾ ಟ್ರಸ್ಟ್ ಉಡುಪಿಯ ಸಂಶೋಧನಾ ತಂಡ ಈ ಸಂಶೋಧನೆಗೆ ನೆರವಾಗಿದೆ ಎಂದು ಪ್ರೊ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುತೂಹಲಕರವಾದ ಶಿಲ್ಪ

ದೀಪದಲ್ಲಿರುವ ಖಡ್ಗ ರಾವಣನ ಶಿಲ್ಪ ಅತ್ಯಂತ ಕುತೂಹಲಕರವಾಗಿದೆ. ಅರೆಬೆತ್ತಲೆಯಾಗಿ ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಮಾರಿಯ ಭುಜದ ಮೇಲೆ ಆಸೀನವಾಗಿರುವ ಖಡ್ಗ ರಾವಣ ತನ್ನ ಬಲಮುಂದಿನ ಕೈಯಲ್ಲಿ ಖಡ್ಗ ಹಾಗೂ ಹಿಂದಿನ ಕೈಯಲ್ಲಿ ನೇಗಿಲನ್ನು ಹಿಡಿದಿದ್ದಾನೆ. ಎಡಮುಂದಿನ ಕೈಯಲ್ಲಿ ಕಪಾಲ ಅಥವಾ ಪಾನಪಾತ್ರೆಯಿದೆ ಹಾಗೂ ಎಡಹಿಂದಿನ ಕೈಯಲ್ಲಿ ರುಂಡವಿದೆ. ಈ ಶಿಲ್ಪ ಲಕ್ಷಣಗಳು ಖಡ್ಗ ರಾವಣ ಪಾಲಕ ಮತ್ತು ವಿನಾಶಕ ಶಕ್ತಿಯ ದ್ಯೋತಕವಾಗಿದೆ. ದೇವಾಲಯದ ಹೊರ ಆವರಣದಲ್ಲಿ ಖಡ್ಗ ರಾವಣನನ್ನು ದೇವಾಲಯದ ಪ್ರಬಲ ರಕ್ಷಕ ದೈವವಾಗಿ ಆರಾಧಿಸಲಾಗುತ್ತಿರುವುದು ವಿಶೇಷವಾಗಿದೆ ಎಂದು ಮುರುಗೇಶಿ ಟಿ.ಹೇಳಿದ್ದಾರೆ.