ಉಡುಪಿಯಲ್ಲಿ ಇಂದ್ರಾಣಿ ನದಿ ಉಳಿಸಿ ಬೃಹತ್ ಅಭಿಯಾನಕ್ಕೆ ಚಾಲನೆ, ಇಂದ್ರಾಣಿ ಶುದ್ಧವಾದರೆ ನಗರದ ಸಮಸ್ಯೆಗಳಿಗೆ ಪರಿಹಾರ: ಶ್ಯಾನ್ ಭಾಗ್

ಉಡುಪಿ ನಗರದಲ್ಲಿ ಇಂದ್ರಾಣಿ ನದಿಯ ಉಳಿವಿಗೆ ಪರಿಸರಾಸಕ್ತ ಯುವಕರ ತಂಡ ಹಮ್ಮಿಕೊಂಡ ಇಂದ್ರಾಣಿ ನದಿ ಉಳಿಸಿ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಇಂದ್ರಾಳಿ ಆಂಜನೇಯ ದೇವಳದ ಕೆರೆಯ ಬಳಿ ವಾಹನ ಜಾಥಕ್ಕೆ ಚಾಲನೆ ನೀಡಿದ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನ್ ಭಾಗ್ ಅವರು ಮಾತನಾಡಿ, ಇಂದ್ರಾಣಿ ನದಿ ಶುದ್ಧವಾದಲ್ಲಿ ನಗರದ ಹಲವು ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಲಿದೆ. ಹಿಂದೆ ಇಂದ್ರಾಣಿ ನದಿ ಉಗಮದಿಂದ ಕಡಲು ಸೇರುವ ಮೊದಲು 8 ದೇಗುಲಗಳ ಸರೋವರವನ್ನು ತುಂಬಿಕೊಂಡು ಹೋಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಕಾಲಕಾಲಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸದೆ ನಿರ್ಲ್ಯಕ್ಷದ ಪರಿಣಾಮ ಇಂದ್ರಾಣಿ ನದಿ ಈ ದುಸ್ಥಿತಿಗೆ ತಲುಪಿದೆ ಎಂದರು.
ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಬೇಕು. ಮೊದಲು ಮೂಲಭೂತ ಸೌಕರ್ಯಗಳನ್ನು ಮಾಡಬೇಕು. ನದಿ ಉಳಿವಿಗಾಗಿ ಯುವಕರು ಮುಂದಾಗಿರುವುದು ಒಳ್ಳೆಯ ವಿಚಾರ ಎಂದು ಶ್ಲಾಘಿಸಿದರು.
ಇಂದ್ರಾಣಿ ಶ್ರೀ ಪಂಚದುರ್ಗ ಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಜಯಕರ ಶೆಟ್ಟಿ, ಅಭಿಯಾನ ಸಂಚಾಲಕ ಶ್ರೀಕಾಂತ್ ಶೆಟ್ಟಿ, ಪರಿಸರ ಆಸಕ್ತರಾದ ಪ್ರೇಮಾನಂದ ಕಲ್ಮಾಡಿ, ಪ್ರಕಾಶ್ ಮಲ್ಪೆ, ಮಹಮ್ಮದ್ ಮೌಲ, ಎಸ್.ಎ ಕೃಷ್ಣಯ್ಯ, ನಗರಸಭೆಯ ವಿಜಯ ಕೊಡವೂರು ಮೊದಲಾದವರು ಪಾಲ್ಗೊಂಡಿದ್ದರು.

ಬೃಹತ್ ಜಾಥ:
ಇಂದ್ರಾಣಿ ಉಳಿಸಿ ಅಭಿಯಾನಕ್ಕೆ ಜನರಿಂದ ಉತ್ತಮ ಬೆಂಬಲ ದೊರೆಯಿತು. ಇಂದ್ರಾಣಿ ನದಿ ಸಾಗುವ ಪ್ರದೇಶಗಳಲ್ಲಿ ಬೃಹತ್ ವಾಹನ ಜಾಥ ನಡೆಯಿತು. ಕೊಡವೂರು ವಿಪ್ರ ಸಭಾ ಭವನವರೆಗೆ ಸಾಗಿತು. ಸಭಾ ಭವನದಲ್ಲಿ ಮುಂದಿನ ಹೋರಾಟದ ಬಗ್ಗೆ ಸಮಾಲೋಚನ ಸಭೆ ನಡೆಯಿತು.