ಉಡುಪಿ: ಇಂದ್ರಾಳಿಯ ದ್ವಿಚಕ್ರ ವಾಹನಶೋರೂಂ ಇರುವ ಕಟ್ಟಡದಲ್ಲಿ ಜೂ.23ರಂದು ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ನಾಲ್ಕು ಅಂಗಡಿಗಳಿಗೆ ಹಾನಿಯಾಗಿದ್ದು, ಒಟ್ಟು 5.75 ಕೋಟಿ ರೂ. ನಷ್ಟು ಉಂಟಾಗಿದೆ ಎನ್ನಲಾಗಿದೆ.
ಜಯರಾಮ್ ಸುವರ್ಣ ಎಂಬವರ ಮೂರು ಅಂತಸ್ತಿನ ಎಆರ್‌ಜೆ ಆರ್ಕೆಡ್ ಕಟ್ಟಡದ ಕೆಳ, ಮೊದಲ ಮತ್ತು ಎರಡನೆ ಅಂತಸ್ತಿನಲ್ಲಿರುವ ಅವರದ್ದೆ ಮಾಲಕತ್ವದ ‘ಜೈದೇವ್ ಮೋಟೋ ರೆನ್’ ವೆಸ್ಪ ಮತ್ತು ಅಪ್ರಿಲ್ಲಾ ದ್ವಿಚಕ್ರ ವಾಹನಗಳ ಶೋರೂಂ, ಮೂರನೇ ಮಹಡಿಯಲ್ಲಿರುವ ಉಡುಪಿಯ ಸೌಜನ್ಯ ಶೆಟ್ಟಿ ಮಾಲಕತ್ವದ ವೇರ್‌ಹೌಸ್ ಜಿಮ್ ಸೆಂಟರ್ ಮತ್ತು ಅರವಿಂದ ಕುಮಾರ್ ಎಂಬವರ ಕೃಷ್ಣ ಇಂಜಿನಿಯರ್ಸ್ ಕಚೇರಿ, ನೆಲ ಅಂತಸ್ತಿನಲ್ಲಿರುವ ಶೇಷಾದ್ರಿ ಉಪಾಧ್ಯಾಯ ಅವರ ಕರ್ವ್ ಆ್ಯಡಿಕ್ಷನ್ ಬಟ್ಟೆ ಅಂಗಡಿಗಳಿಗೆ ಈಬೆಂಕಿ ಅವಘಡದಿಂದ ಅಪಾರ ಹಾನಿ ಸಂಭವಿಸಿದೆ.
ಶೋರೂಂನಲ್ಲಿದ್ದ ಎರಡು ಹೊಸ ದ್ವಿಚಕ್ರವಾಹನಗಳು ಮತ್ತು ಸರ್ವಿಸ್ ವಿಭಾಗದಲ್ಲಿ ನಿಲ್ಲಿಸಲಾದ 9 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 11 ದ್ವಿಚಕ್ರ ವಾಹನಗಳು ಬೆಂಕಿಗೆ ಅಹುತಿಯಾಗಿವೆ. ಅದೇ ರೀತಿ ತಳ ಅಂತಸ್ತಿನಲ್ಲಿರುವ ಸರ್ವಿಸ್ ಸೆಂಟರ್ ಹಾಗೂ ಬಿಡಿ‘ಭಾಗಗಳ ವಿಭಾಗಗಳು ಸಂಪೂರ್ಣ ಸುಟ್ಟು ಹೋಗಿವೆ. ಸುಮಾರು 1.6ಕೋಟಿ ಮೌಲ್ಯದ ಬಿಡಿಭಾಗಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.
ಅಲ್ಲದೆ ಫರ್ನಿಚರ್, ಹೆಲ್ಮೆಟ್, 11 ಕಂಪ್ಯೂಟರ್, ವಾಹನಗಳಿಗೆ ಸಂಬಂಧಿಸಿದ ದಾಖಲೆಗಳು, ವಿದ್ಯುತ್ ಪರಿಕರಗಳು, ಪಿಓಪಿ ಸಹಿತ ಶೋರೂಂನ ಎರಡನೇ ಮಹಡಿ ಸುಟ್ಟು ಭಸ್ಮವಾಗಿದೆ. ಶೋರೂಂನ ಮೊದಲನೇ ಮಹಡಿಯ ಗಾಜುಗಳು ಪುಡಿಯಾಗಿದ್ದರೂ ಒಳಗೆ ನಿಲ್ಲಿಸಲಾದ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ. ಇಲ್ಲಿನ ಪಿಓಪಿ ಮಾತ್ರ ಸಂಪೂರ್ಣ ಕುಸಿದು ಬಿದ್ದಿರುವುದಾಗಿ ಕಂಡುಬಂದಿದೆ.
ಎರಡು ಮೂರು ವಾಹನಗಳಿಗೆ ಸಣ್ಣ ಪುಟ್ಟಹಾನಿಯಾಗಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಸುಮಾರು 25-30 ವಾಹನಗಳನ್ನು ಶೋರೂಂನಿಂದ ಹೊರಗಡೆ ತಂದು ಇಟ್ಟಿದ್ದಾರೆ. ಹೀಗೆ ಈ ದುರಂತದಿಂದ ಜೈದೇವ್ ಮೋಟೋ ರೆನ್ ಶೋರೂಂಗೆ ಸುಮಾರು ಐದು ಕೋಟಿ ರೂ. ನಷ್ಟಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಶೋರೂಂನ ಮೇಲಿನ ಮಹಡಿಯಲ್ಲಿ ಸಟಪ್ ವೇರ್‌ಗೆ ಸಂಬಂಧಿದ ಇವರದ್ದೇ ಕಚೇರಿ ಇದ್ದು, ಇಲ್ಲಿನ ಎರಡು ಕಂಪ್ಯೂಟರ್, ಎರಡು ಲ್ಯಾಪ್‌ಟಾಪ್ ಸಹಿತ ಇಡೀ ಕಚೇರಿಯೇ ಸುಟ್ಟು ಕರಕಲಾಗಿದೆ. ಜಯರಾಮ್ ಈ ಹಿಂದೆ ಇದೇ ಕಟ್ಟಡದಲ್ಲಿ ಜೈದೇವ್ ಮೋಟಾರ್ಸ್ ಎಂಬ ಹೀರೋ ಕಂಪೆನಿಯ ದ್ವಿಚಕ್ರ ವಾಹನ ಗಳ ಶೋರೂಂನ್ನು ನಡೆಸುತ್ತಿದ್ದರು. ನಷ್ಟದ ಹಿನ್ನೆಲೆಯಲ್ಲಿ ಆ ಕಂಪೆನಿಯನ್ನು ಮುಚ್ಚಿ, 2018ರ ಅಕ್ಟೋಬರ್ ತಿಂಗಳಲ್ಲಿ ವೆಸ್ಪಾ ಹಾಗೂ ಅಪ್ರಿಲ್ಲಾ ಕಂಪೆನಿಯ ಹೊಸ ಶೋರೂಂನ್ನು ಆರಂಭಿಸಿದ್ದರು.
ಮೂರನೇ ಮಹಡಿಯಲ್ಲಿರುವ ವೇರ್‌ಹೌಸ್ ಜಿಮ್ಸೆಂಟರ್‌ನ ಹವಾ ನಿಯಂತ್ರಣ, ಸಿಸಿ ಕ್ಯಾಮೆರಾ, ವಿದ್ಯುತ್ ಪರಿಕರ, ಗಾಜು, ನಾಮಫಲಕಗಳಿಗೆ ಹಾನಿಯಾಗಿದ್ದು, ಸುಮಾರು ಒಂದು 3.5ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಅದೇ ರೀತಿ ನೆಲ ಅಂತಸ್ತಿನಲ್ಲಿರುವ ಎಡಿಕ್ಷನ್ ಬಟ್ಟೆ ಅಂಗಡಿಯ ಬಟ್ಟೆಗಳು, ನಾಮಫಲಕದ ಬೋರ್ಡ್, ಹವಾನಿಯಂತ್ರಣ ಗಳಿಗೆ ಹಾನಿ ಉಂಟಾಗಿದ್ದು, ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿದೆ.
ಕಟ್ಟಡದ ಮೂರನೆ ಮಹಡಿಯಲ್ಲಿರುವ ಕೃಷ್ಣಇಂಜಿನಿಯರ್ಸ್ ಕಚೇರಿಯ ಕಂಪ್ಯೂಟರ್, ಲ್ಯಾಪ್‌ಟಾಪ್ ಹಾಗೂ ಇತರ ಉಪಕರಣಗಳು ಸುಟ್ಟು ಹೋಗಿದ್ದು, ಸುಮಾರು 61,69,900ರೂ. ನಷ್ಟ ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿ ನಾಲ್ಕು ದೂರುಗಳನ್ನು ಮಣಿಪಾಲ ಠಾಣೆಗೆ ಸಲ್ಲಿಕೆಯಾಗಿದೆ.
ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಅವಘಡ:
ಕಟ್ಟಡದ ಶೋರೂಂನ ಮೇಲಿನ ಮಹಡಿಯಲ್ಲಿಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಆ ಬೆಂಕಿ ವಿದ್ಯುತ್ ವೇರ್ ಮೂಲಕ ತಳ ಅಂತಸ್ತಿನಲ್ಲಿರುವ ಸರ್ವಿಸ್ ಸೆಂಟರಿಗೆ ಹಬ್ಬಿ ಇಡೀ ಕಟ್ಟಡಕ್ಕೆ ವಿಸ್ತರಿಸಿತ್ತೆಂದು ಅಗ್ನಿಶಾಮಕದಳ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ.
ರಾತ್ರಿ 9.30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಮಾಹಿತಿ ತಿಳಿದು ಅಗ್ನಿಶಾಮಕ ದಳದ ವಾಹನಗಳು ರಾತ್ರಿ 9.50ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದವು. ಉಡುಪಿಯ ಎರಡು ಮತ್ತು ಮಲ್ಪೆ ಒಂದು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು. ಒಟ್ಟು 16ಅಗ್ನಿಶಾಮಕ ದಳದ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜೂ.24ರ ನಸುಕಿನ ವೇಳೆ 3.30ರ ಸುಮಾರಿಗೆ ಸಂಪೂರ್ಣ ಬೆಂಕಿಯನ್ನು ನಂದಿಸಲಾಯಿತು. ಅದಕ್ಕಾಗಿ ಸುಮಾರು ಮೂರು ವಾಹನಗಳಲ್ಲಿ ಎಂಟು ಟ್ರಿಪ್ ನೀರನ್ನು ಬಳಸಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ವಸಂತ ಕುಮಾರ್ ತಿಳಿಸಿದ್ದಾರೆ.