ಉಡುಪಿ: ನಗರದ ಶ್ರೀಗುರು ನಿತ್ಯಾನಂದ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ “ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ನ ನೂತನ ಶಾಖೆಯ ಉದ್ಘಾಟನೆ

ಉಡುಪಿ: ಇಲ್ಲಿನ ಕಲ್ಪನಾ ರಸ್ತೆಯ ಮಿತ್ರ ಆಸ್ಪತ್ರೆಯ ಸಮೀಪದ ಶ್ರೀ ಗುರು ನಿತ್ಯಾನಂದ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ “ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ಶಾಖೆ ಭಾನುವಾರ ಉದ್ಘಾಟನೆಗೊಂಡಿತು.

ಸ್ಥಳಾಂತರ ಗೊಂಡಿರುವ ಶಾಖೆಯನ್ನು ಡೈಜಿ ವರ್ಲ್ಡ್ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಅವರು ಉದ್ಘಾಟಿಸಿದರು. ಬಳಿಕ ಸಂಸ್ಥೆಯ ಯಶಸ್ವಿಗೆ ಶುಭ ಹಾರೈಸಿದರು.

ಈ ವೇಳೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ತಮ್ಮ ಉದ್ದಿಮೆಯಲ್ಲಿ ಯಶಸ್ವಿಯಾಗಬೇಕಾದರೆ ಆ ಉದ್ದಿಮೆಯಲ್ಲಿ ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಉತ್ತಮ ಗುಣಮಟ್ಟದ ಸೇವೆ ನೀಡಬೇಕು. ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ನ ರವೀಂದ್ರ ಶೆಟ್ಟಿ ಅವರು ತಾವು ಉದ್ದಿಮೆ ಆರಂಭಿಸಿದಾಗಿನಿಂದ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ‌ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಉಡುಪಿ ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜೊತೆಗೆ ತಮ್ಮ ಸಂಸ್ಥೆಯ ಮೂಲಕ ಹಲವಾರು ಮಂದಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಈ ಸಂಸ್ಥೆಯ ಮೂಲಕ ನಿಗದಿತ, ಕಡಿಮೆದರಲ್ಲಿ ಹಾಗೂ ಕೆಲವೊಮ್ಮೆ ಉಚಿತವಾಗಿ ಮೂಲಭೂತ ಅವಶ್ಯಕತೆಗಳಾಗಿರುವ ವೈದ್ಯಕೀಯ ಉಪಕರಣಗಳನ್ನು ನೀಡುತ್ತಿದ್ದಾರೆ. ಆ ಮೂಲಕ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿದೆ, ಹಿರಿಯ ನಾಗರಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಆಸ್ಪತ್ರೆಗಳಲ್ಲಿ ಅತ್ಯಂತ ತೊಂದರೆಗೀಡಾದ ರೋಗಿಗಳಿಗೆ ಉಚಿತವಾಗಿ ಸವಲತ್ತುಗಳನ್ನು ಒದಗಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಇದೇ ರೀತಿ ಇವರಿಂದ ಜನರಿಗೆ ಇನ್ನಷ್ಟು ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ಉಡುಪಿ ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ವಿ.ಜಿ. ಶೆಟ್ಟಿ, ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಪಾಲುದಾರರಾದ ರವೀಂದ್ರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.