ಉಡುಪಿ: ಆದರ್ಶ ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್ ಸೈನ್ಸಸ್ ಉದ್ಘಾಟನೆ

ಉಡುಪಿ: ಅಲೆವೂರು ಗ್ರಾಮದ ರಾಂಪುರದಲ್ಲಿ ಆದರ್ಶ ಕಾಲೇಜ್ ಆಫ್ ನರ್ಸಿಂಗ್ ಮತ್ತು ಆದರ್ಶ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಭಾನುವಾರ ಉದ್ಘಾಟನೆಗೊಂಡಿತು.

ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಆದರ್ಶ ನರ್ಸಿಂಗ್, ಪ್ಯಾರಾ ಮೆಡಿಕಲ್ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ರೋಗಿಗಳನ್ನು ಆರೈಕೆ ಮಾಡುವ ದಾದಿಯರ ಕೊರತೆ ಇದ್ದು, ಅದನ್ನು ಸರಿದೂಗಿಸಲು ಇಂತಹ ತರಬೇತಿ ಸಂಸ್ಥೆಗಳು ಅವಶ್ಯಕ ಎಂದರು.

ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಸರಿಯಾದ ಧರ್ಮ ಪಾಲನೆಯಿಂದ ದೇಶದ ಬಡತನ ಸಹಿತ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ ಎಂದರು.

ಕೊಪ್ಪ ಗೌರಿಗದ್ದೆ ಅವಧೂತ ವಿನಯ ಗುರೂಜಿ ಶುಭಹಾರೈಸಿದರು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿದರು.

ಆದರ್ಶ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮತ್ತು ಆದರ್ಶ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಜಿ.ಎಸ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಂಸ್ಥೆಯ ಮೂಲಕ‌ ಸಮಾಜದ ಎಲ್ಲ ವರ್ಗದ ಜನರಿಗೂ ಒಳ್ಳೆಯ ಆರೋಗ್ಯ ಸೇವೆ ನೀಡಲು ಪ್ರಯತ್ನಿಸಲಾಗುವುದು ಎಂದರು.

ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಬಿ.ಎಂ. ಸುಕುಮಾರ್ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಉಡುಪಿ ಜಿಲ್ಲಾ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಎಂ. ಗೋಪಾಲ್ ಭಟ್, ಅಲೆವೂರು ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಕಾಂಚನ್, ಡಾ.ಸಿ.ವಿ. ಯೋಗರಾಜೇಂದ್ರ, ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.