ಬೆಳಗಾವಿಯಲ್ಲಿ ಮಿಂಚಿದ ಅಕ್ಕ ಪಡೆ: ಕುತೂಹಲದಿಂದ ಕಾರ್ಯಕ್ರಮಕ್ಕೆ ಹೋದ್ರೆ ಶಾಕ್

ಬೆಳಗಾವಿ: ನಗರದಲ್ಲಿ ಅಕ್ಕ ಪಡೆ ನಡೆಸಿದ ತ್ವರಿತ ಕಾರ್ಯಾಚರಣೆಯಿಂದ ಕೇವಲ ಎರಡು ದಿನಗಳಲ್ಲಿ ಎರಡು ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆದು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ. ಈ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಾಲ್ಯ ವಿವಾಹ ಕಾನೂನುಬಾಹಿರವೆಂದು ತಿಳಿದಿದ್ದರೂ ಪೋಷಕರು ಮುಂದುವರಿದಿದ್ದ ಎರಡು ವಿಭಿನ್ನ ಘಟನೆಗಳಲ್ಲಿ ಅಕ್ಕ ಪಡೆ ತಕ್ಷಣ ಮಧ್ಯಪ್ರವೇಶ ಮಾಡಿ ವಿವಾಹಗಳನ್ನು ನಿಲ್ಲಿಸಿದೆ. ರಕ್ಷಿಸಲಾದ ಬಾಲಕಿಯರು 13 ಮತ್ತು 17 ವರ್ಷದವರು ಎಂದು ತಿಳಿದುಬಂದಿದೆ.

ಬೆಳಗಾವಿಯ ವಂಟಮೂರಿ ಕಾಲೋನಿಯಲ್ಲಿ ಏನೋ ಕಾರ್ಯಕ್ರಮ ನಡೆಯುತ್ತಿರುವುದು ಗಮನಕ್ಕೆ ಬಂದಿತು. ಕಾರ್ಯಕ್ರಮದ ಕುರಿತು ಕುತೂಹಲದಿಂದ ಅಕ್ಕ ಪಡೆ ತಂಡ ಸ್ಥಳಕ್ಕೆ ತೆರಳಿ ನೋಡಿದಾಗ ಅದು ಬಾಲ್ಯ ವಿವಾಹವಾಗಿರುವುದು ದೃಢಪಟ್ಟಿತು. 17 ವರ್ಷದ ಬಾಲಕಿಯ ಮದುವೆ ನಡೆಯುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮದುವೆಯನ್ನು ನಿಲ್ಲಿಸಿದರು.

ಇದೇ ರೀತಿಯಲ್ಲಿ ಶಹಾಪುರ ಪ್ರದೇಶದಲ್ಲಿ 13 ವರ್ಷದ ಬಾಲಕಿಯ ಮದುವೆ ನಡೆಯುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಅಕ್ಕ ಪಡೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿತು. ಪರಿಶೀಲನೆಯ ನಂತರ ಅಲ್ಲಿಯೂ ಬಾಲ್ಯ ವಿವಾಹ ನಡೆಯುತ್ತಿರುವುದು ದೃಢಪಟ್ಟಿದ್ದು, ತಕ್ಷಣವೇ ಅದನ್ನು ತಡೆಗಟ್ಟಲಾಯಿತು.

ಈ ಎರಡು ಪ್ರಕರಣಗಳಲ್ಲಿ ಬಾಲಕಿಯರ ತಂದೆ ವಿರುದ್ಧ ಪೊಲೀಸರು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಕ ಪಡೆಯ ಕಾರ್ಯಕ್ಕೆ ಮೆಚ್ಚುಗೆ

ಅಕ್ಕ ಪಡೆಯ ತ್ವರಿತ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲ್ಯ ವಿವಾಹ ತಡೆಯುವುದರ ಜೊತೆಗೆ ಹೆಣ್ಣುಮಕ್ಕಳ ಸುರಕ್ಷತೆಗೂ ಅಕ್ಕ ಪಡೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ನಗರದಲ್ಲಿ ಹೆಚ್ಚಿದ ಜಾಗೃತಿ

ಬೆಳಗಾವಿ ನಗರದಲ್ಲಿ ಶಾಲಾ-ಕಾಲೇಜುಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಕ್ಕ ಪಡೆ ನಿಯಮಿತವಾಗಿ ಸುತ್ತಾಟ ನಡೆಸುತ್ತಿದೆ. ಪುಂಡ ಪೋಕರಿಗಳಿಂದ ಹೆಣ್ಣುಮಕ್ಕಳ ರಕ್ಷಣೆಗೆ ಈ ತಂಡವನ್ನು ವಿಶೇಷವಾಗಿ ನಿಯೋಜಿಸಲಾಗಿದೆ.

ಒಟ್ಟಿನಲ್ಲಿ, ಅಕ್ಕ ಪಡೆಯ ಈ ತ್ವರಿತ ಕ್ರಮಗಳು ನಗರದಲ್ಲಿ ಬಾಲ್ಯ ವಿವಾಹ ತಡೆ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸಿವೆ.