ಉಡುಪಿ: ಟ್ರಕ್ ನಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಜಾಲವೊಂದನ್ನು ಆಹಾರ ನಿರೀಕ್ಷಕರು ಹಾಗೂ ಕಾಪು ಪೊಲೀಸರ ನೇತೃತ್ವದ ತಂಡ ಮಣಿಪುರ ದೆಂದೂರುಕಟ್ಟೆ ಬಳಿ ಪತ್ತೆ ಮಾಡಿ ಇಬ್ಬರನ್ನು ಬಂಧಿಸಿದೆ.
ಬಂಧಿತರನ್ನು ವಡ್ಡರ್ಸೆ ಬನ್ನಾಡಿ ನಿವಾಸಿ ಮಹಮ್ಮದ್ ಅನ್ಸಾರ್ (23) ಹಾಗೂ ದೆಂದೂರುಕಟ್ಟೆಯ ನಿವಾಸಿ ಅಬ್ದುಲ್ ಷರೀಫ್ (39) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ₹1.56ಲಕ್ಷ ಮೌಲ್ಯದ 142 ಕ್ವಿಂಟಾಲ್ ಅಕ್ಕಿ, 10 ಲಕ್ಷ ಮೌಲ್ಯದ ಟ್ರಕ್, ತೂಕದ ಯಂತ್ರ ಹಾಗೂ ಬ್ಯಾಗ್ ಪ್ಯಾಕಿಂಗ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರದ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಮನೆ ಮನೆಗೆ ತೆರಳಿ ಖರೀದಿಸಿ, ಅದನ್ನು ಹೆಚ್ಚಿನ ಬೆಲೆ ಮಾರಾಟ ಮಾಡಲು ಸಾಗಿಸುತ್ತಿರುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.