ಉಡುಪಿ: ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಕಳಿಸುತ್ತೇವೆ; ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ

ಉಡುಪಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಬಾಜ್ ವಿವಾದ ತಾರಕ್ಕೇರಿದ್ದು, ಇದೀಗ ಹಿಂದೂ ಸಂಘಟನೆಗಳು ಇದರ ವಿರುದ್ಧ ಸಿಡಿದೆದ್ದಿವೆ.

ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಕಳಿಸುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಹಿಜಾಬ್ ವಿವಾದದ ಕುರಿತು ಶುಕ್ರವಾರ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗದ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮತೀಯ ಬೀಜ ಬಿತ್ತಿ ಶೈಕ್ಷಣಿಕವಾಗಿ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಈ ಹಿಜಾಬ್ ವಿವಾದವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಬೇಕೆನ್ನುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ‌. ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಲು ಯಾವುದೇ ಕಾರಣಕ್ಕೂ ಬಿಡಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಶಿಕ್ಷಣ ಸಂಸ್ಥೆಯಲ್ಲಿ ನೂರು ಮಂದಿ ಮುಸ್ಲಿಂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರೆಲ್ಲರಿಗೂ ಸ್ಕಾರ್ಫ್ ಹಾಕಬೇಕೆಂದು ಅನಿಸುತ್ತಿಲ್ಲ, ಆದರೆ ಬೆರಳೆಣಿಕೆ ವಿದ್ಯಾರ್ಥಿನಿಯರು ಮಾತ್ರ ಸ್ಕಾರ್ಫ್ ಹಾಕಿಕೊಳ್ಳಲು ಪಟ್ಟು ಹಿಡಿದಿರುವುದು ಯಾಕೆ ಎಂದು ಪ್ರಶ್ನಿಸಿದರು.

ಇಂದು ಹಿಜಾಬ್, ನಾಳೆ ಬುರ್ಕಾ, ಮುಂದೆ ಟೋಪಿ ಹಾಕಿಕೊಂಡು ಬರುತ್ತೇವೆ ಎನ್ನಬಹುದು. ಇದಕ್ಕೆಲ್ಲ ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಕಾಲೇಜಿನ ನಿಯಮಕ್ಕೆ ಬದ್ಧವಾಗಿ, ಸಮಾನ ಶಿಕ್ಷಣ ಪಡೆಯುವುದಾದರೆ ಪಡೆಯಲಿ. ಇಲ್ಲದಿದ್ದರೆ ನಿಮಗೆ ಬೇಕಾದಲ್ಲಿ ಶಿಕ್ಷಣ ಪಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ವಿವಾದದ ಬಗ್ಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.