ಉಡುಪಿ: ಸನ್ಮಾನ, ಕಾರ್ಯಕ್ರಮಗಳನ್ನು ಆಯೋಜಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು: ಡಿಸಿ ಜಿ. ಜಗದೀಶ್ ಎಚ್ಚರಿಕೆ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ದೃಢಪಡುವ ಪಾಸಿಟಿವಿಟಿ ರೇಟ್ ಶೇ. 6ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿದರೂ ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ (ಜೂನ್ 14) ಹಲವಾರು ವಿನಾಯಿತಿಗಳನ್ನು ಘೋಷಣೆ ಮಾಡಿದೆ.

ಅಗತ್ಯ ವಸ್ತು ಖರೀದಿ ಸಮಯವನ್ನು 2 ಗಂಟೆಯವರೆಗೂ ವಿಸ್ತರಿಸಲು ಅನುಮತಿ‌ ನೀಡಿದೆ. ಅಲ್ಲದೆ, 40 ಜನರಿಗೆ ಸೀಮಿತಗೊಳಿಸಿ ಮದುವೆ ನಡೆಸಲು ಅವಕಾಶ ನೀಡಿದೆ. ಆದರೆ ಈ ನಡುವೆ ಅನೇಕ ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕಂಡು ಬಂದಿದೆ. ಇವು ಚಾಲ್ತಿಯಲ್ಲಿರುವ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿಲ್ಲ. ಅಲ್ಲದೆ, ಇವು ಕೋವಿಡ್ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ಸಂಘ -ಸಂಸ್ಥೆಗಳು ಸನ್ಮಾನ ಹಾಗೂ ಇತರೆ ಯಾವುದೇ ಕಾರ್ಯಕ್ರಮ ಆಯೋಜಿಸಬಾರದು.

ಆಹಾರ ಕಿಟ್, ಮಾಸ್ಕ್ ಮೊದಲಾದ ವೈದ್ಯಕೀಯ ಪರಿಕರಗಳನ್ನು ವಿತರಿಸುವ ಸಂಘ ಸಂಸ್ಥೆಗಳು ಕೂಡ ಯಾವುದೇ ಸಮಾರಂಭ ನಡೆಸದೆ, ಅವುಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದ್ದಾರೆ.

ಯಾವುದೇ ಸಂಘ ಸಂಸ್ಥೆಗಳು ಅಥವಾ ಸಾರ್ವಜನಿಕರು ಸನ್ಮಾನ ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.