ಉಡುಪಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಅಧ್ಯಕ್ಷ ಟಿ.ಶ್ಯಾಮ್ ಭಟ್ ಡಾ.ಟಿ.ಶಾಂ ಭಟ್ ಹಾಗೂ
ಸದಸ್ಯರಾದ ಎಸ್.ಕೆ ವಂಟಿಗೋಡಿ ಅವರು ಇಂದು ನಗರದ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿ, ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾಸ್ಪತ್ರೆಯ ನೋಂದಣಿ ಕೇಂದ್ರ, ರೋಗಿಗಳ ವಾರ್ಡ್, ತೀವ್ರ ನಿಗಾ ಘಟಕ, ಔಷಧಿ ಉಗ್ರಾಣ, ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ರೋಗಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಲು ಹೆಚ್ಚು ಜನರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದ ಹಿನ್ನೆಲೆ, ಜಿಲ್ಲಾ ಸರ್ಜನ್ ಅವರಿಗೆ ನೋಂದಣಿ ಕೌಂಟರ್‌ಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಇನ್ನೂ ಹೆಚ್ಚು ನೋಂದಣಿ ಕೌಂಟರ್‌ಗಳನ್ನು ಸ್ಥಾಪಿಸಲು ತಿಳಿಸಿದ ಅವರು, ಆಸ್ಪತ್ರೆಯ ಚಿಕಿತ್ಸೆಗೆ ಬಂದಿರುವ ರೋಗಿಗಳಿಂದ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿಗಳನ್ನು ಕೇಳಿ ಪಡೆದರು.
ಆಸ್ಪತ್ರೆಯ ಸ್ವಚ್ಛತೆ, ಶುಭ್ರತೆ, ಪರಿಶೀಲಿಸಿದ ಅವರು, ಆಸ್ಪತ್ರೆಯ ಒಳ ಕಾರಿಡಾರ್‌ಗಳಲ್ಲಿ ಬೆಳಕಿನ ಅಭಾವ ಕಂಡು ಬಂದ ಹಿನ್ನಲೆ, ಕಾರಿಡಾರ್‌ಗಳಲ್ಲಿ ಲೈಟ್‌ಗಳನ್ನು ಅಳವಡಿಸಲು ಸೂಚನೆ ನೀಡಿದರು.
ರಾಜ್ಯದ ಔಷಧಿ ಕೇಂದ್ರಗಳಿ೦ದ ಸರಬರಾಜಾದ ಔಷಧಿ ಸೇರಿದಂತೆ ಮತ್ತಿತರ ಪರಿಕರಗಳನ್ನು ಉಗ್ರಾಣದ ಒಳಭಾಗದಲ್ಲಿ ಇಡದೇ ಕಾರಿಡಾರ್ ಗಳಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಪ್ರಶ್ನಿಸಿದ ಅವರು, ಔಷಧಿಗಳು ಅವಧಿ ಮುನ್ನವೇ ಜನಸಾಮಾನ್ಯರಿಗೆ ಉಪಯೋಗಕ್ಕೆ ಬರುವಂತೆ ಕ್ರಮವಹಿಸಬೇಕೆಂದರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಸ್ಪತ್ರೆಯ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಅವರು, ಆಸ್ಪತ್ರೆ
ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ಬಗ್ಗೆ ಹಾಗೂ ಹೆಚ್ಚುವರಿ ಬೇಡಿಕೆಗಳಿಗಾಗಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್, ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
















