ಉಡುಪಿ: ಶೃಂಗೇರಿಯಲ್ಲಿ ಈಚೆಗೆ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆಗೆ ವ್ಯವಸ್ಥೆ ನಕ್ಸಲ್ ಹಣೆಪಟ್ಟಿ ಕಟ್ಟಿದೆ. ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರೆಂಬ ಕಾರಣಕ್ಕೆ ಸರ್ಕಾರ ಅನಗತ್ಯ ವಿವಾದ ಎಬ್ಬಿಸಿ ಅನುದಾನ
ನಿಲ್ಲಿಸಿದೆ. ಅಲ್ಲದೆ, ಪೊಲೀಸ್ ಸರ್ಪಗಾವಲಿನಲ್ಲಿ ದಾಂದಲೆ ನಡೆಸಿ, ಎರಡು ದಿನ ನಡೆಯಬೇಕಿದ್ದ ಗೋಷ್ಠಿಯನ್ನು ಒಂದೇ ದಿನಕ್ಕೆ ಮುಗಿಸಿದೆ ಎಂದು ಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ, ಲೇಖಕ ಡಾ. ಮಹಾಬಲೇಶ್ವರ ರಾವ್
ಆರೋಪಿಸಿದರು.
ಡಾ. ನಿ. ಮುರಾರಿ ಬಲ್ಲಾಳ್ ಮತ್ತು ಪ್ರೊ. ಕೆ.ಎಸ್. ಕೆದ್ಲಾಯ ನೆನಪಿಗಾಗಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮುರಾರಿ-–ಕೆದ್ಲಾಯ ರಂಗೋತ್ಸವ’ವನ್ನು ಉದ್ಘಾಟಿಸಿ
ಮಾತನಾಡಿದರು.
ಕರ್ನಾಟಕದಾದ್ಯಂತ ಹೋಬಳಿ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಕನ್ನಡ ಸಾಹಿತ್ಯ ಪರಿಷತ್ ಘಟಕಗಳಿವೆ. ಆದರೆ ಯಾವುದೇ ಒಬ್ಬ ಅಧ್ಯಕ್ಷ ಅಥವಾ ಕಾರ್ಯದರ್ಶಿ ಇದನ್ನು ಖಂಡಿಸಿಲ್ಲ. ಅಲ್ಲದೆ, ಕಲಬುರ್ಗಿಯಲ್ಲಿ ಇಂದು ಮುಕ್ತಾಯವಾದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡ ಈ ಬಗ್ಗೆ ತುಟಿಬಿಚ್ಚದೆ ಮೌನಕ್ಕೆ ಶರಣಾಗಿದ್ದರು. ಕನಿಷ್ಠ ಪಕ್ಷ ಪ್ರತಿಭಟನೆಯ ಮಾತನ್ನು ಆಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕೆ ಮೊದಲು ಅನುದಾನ ಬಿಡುಗಡೆ ಮಾಡಿ, ಅದಕ್ಕೆ ಯಾವುದೇ ರೀತಿಯ ತೊಂದರೆ ಮಾಡದಿದ್ದರೆ ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತೇನೆ. ಇಲ್ಲದಿದ್ದರೆ ನಾನು ಭಾಗವಹಿಸುವುದಿಲ್ಲವೆಂದು ಕಲಬುರ್ಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಹೇಳಬಹುದಿತ್ತು. ಅವರು ಹಾಗೆ ಹೇಳಿದ್ದರೆ ಒಂದು ಬದಲಾವಣೆ ಆಗುತ್ತಿತ್ತು ಎಂದರು.
ಅಧ್ಯಕ್ಷರು ಸಮ್ಮೇಳನದಲ್ಲಿ ಮಾತನಾಡಿದರೂ ಎಲ್ಲಿಯೂ ಸಹ ಶೃಂಗೇರಿಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾವೆಲ್ಲ ಯಾವುದನ್ನು ಮಾತನಾಡಿದರೆ ಲಾಭ ಆಗುತ್ತೇ, ಯಾವುದು ಮಾತನಾಡದಿದ್ದರೆ ನಷ್ಟ ಆಗುತ್ತೆ ಎಂಬ ಲೆಕ್ಕಾಚಾರದ ವ್ಯವಹಾರದಲ್ಲಿ
ನಿಪುಣರಾಗಿದ್ದೇವೆ. ಯಾವ ಸಂದರ್ಭಕ್ಕೆ ಬಾಣ ಪ್ರಯೋಗ ಮಾಡಬೇಕು ಅಥವಾ ಯಾವ ವೇಳೆ ಬಾಣ ಹಿಂತೆಗೆಯಬೇಕು ಎನ್ನುವುದನ್ನು ತಿಳಿದಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಸಾಂಸ್ಕೃತಿಕ ಲೋಕ, ಸಾಹಿತ್ಯಿಕ ಲೋಕ ಯಾವತ್ತೂ ಇಷ್ಟು ದರಿದ್ರವಾಗಿರಲಿಲ್ಲ. ಕೆದ್ಲಾಯರು, ಬಲ್ಲಾಳರು ಇದಿದ್ದರೆ ಇದನ್ನು ಖಂಡಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಮಾತನಾಡಿ, ನಾಟಕಗಳು ಬದುಕಿನ ಸೌಂದರ್ಯವನ್ನು ತೋರಿಸಿಕೊಡುತ್ತದೆ. ಆ ಶಕ್ತಿ ರಂಗಭೂಮಿಗೆ ಇದೆ. ಕಲಾವಿದರ ಮೂಲಕ ಸಮಾಜದ ಒಳಿತು ಕೆಡಕುಗಳನ್ನು ನೇರವಾಗಿ ಜನರಿಗೆ ತಲುಪುವಂತೆ ಮಾಡಲು ಸಾಧ್ಯವಿದೆ. ಬೇರ್‍ಯಾವುದೇ ಮಾಧ್ಯಮಗಳಿಗೂ ಈ ಶಕ್ತಿ ಇಲ್ಲ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ, ಸಂತೋಷ್ ಬಲ್ಲಾಳ್ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ವಂದಿಸಿದರು.
ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.