ರಾಮಮಂದಿರಕ್ಕಾಗಿ ಹೋರಾಡುವ ಬಿಲ್ಲವರು ಗರೋಡಿ ಬೇಕೆಂದು ಯಾಕೆ ಹೋರಾಡುತ್ತಿಲ್ಲ: ಜಾನಪದ ವಿದ್ವಾಂಸ ಬಾಬುಶಿವ ಪೂಜಾರಿ ಪ್ರಶ್ನೆ

ಉಡುಪಿ: ರಾಮಮಂದಿರಕ್ಕಾಗಿ ಹೋರಾಟ ಮಾಡುವ, ಶ್ರೀರಾಮ ನಮ್ಮ ದೇವರು ಎಂದು ಪೂಜಿಸುವ ಬಿಲ್ಲವ ಜನಾಂಗ. ಕೋಟಿ ಚೆನ್ನಯ್ಯರು ನಮ್ಮವರು, ನಮ್ಮ ಗರೋಡಿಗಳು ನಮಗೆ ಬೇಕೆಂದು ಯಾಕೆ ಹೋರಾಟ ಮಾಡುತ್ತಿಲ್ಲ. ಯಾಕೆ ಇದರಲ್ಲಿ ನಮಗೆ ಸ್ವಾಧೀನತೆ ಇಲ್ಲವೇ ಎಂದು ಹಿರಿಯ ಜಾನಪದ ವಿದ್ವಾಂಸ ಬಾಬುಶಿವ ಪೂಜಾರಿ ಪ್ರಶ್ನಿಸಿದರು.
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಆದಿಉಡುಪಿಯ ಬೈದಶ್ರೀ ಕಾರ್ಯಾಲಯದಲ್ಲಿ ಬುಧವಾರ ನಡೆದ ಬೈದಶ್ರೀ ಸಾಹಿತ್ಯ ಪ್ರಶಸ್ತಿ ಹಾಗೂ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ತುಳುನಾಡಿನಲ್ಲಿ ಉದ್ದೇಶ ಪೂರ್ವಕವಾಗಿ ಪರಿವರ್ತನೆ ಮಾಡಲಾದ ವಿಚಾರಗಳು ಬಹಳಷ್ಟಿವೆ. ಹಾಗೆ ನಾವು ಕಳೆದುಕೊಂಡ ವಿಚಾರಗಳು ಸಹ ತುಂಬಾ ಇವೆ. ಇಂದು ತುಳು ಸಂಸ್ಕೃತಿ, ಸಭ್ಯತೆ ಮೇಲ್ವರ್ಗದ ಪಾಲಾಗಿದೆ. ತುಳುನಾಡು ಅವರ ಅಧೀನದಲ್ಲಿದೆ. ನಮ್ಮವರು ಭಯದಿಂದ ಯಾವುದನ್ನು ಹೇಳುತ್ತಿಲ್ಲ ಎಂದರು.
ಕೋಟಿ ಚೆನ್ನಯ್ಯರ ಪಾರ್‍ದನ ಪೂರ್ಣ ಸತ್ಯವಲ್ಲ:
ಕೋಟಿ ಚೆನ್ನಯ್ಯರ ಪಾರ್‍ದನದ ವೈಜ್ಞಾನಿಕ ವಿಶ್ಲೇಷಣೆ ಮಾಡಿಲ್ಲ. ಪ್ರಾದೇಶಿಕವಾಗಿ ಸಿಗುವ ವಿಚಾರಧಾರೆಗಳನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಯಾರೋ ಒಂದೆರಡು ಮಂದಿ ಬರೆದಿರುವುದನ್ನೇ ಸತ್ಯ ಎಂದು ತಿಳಿದುಕೊಂಡಿದ್ದೇವೆ. ಪ್ರಸ್ತುತ ಪಾರ್‍ದನದಲ್ಲಿ ಇರುವುದೆಲ್ಲವೂ ಪೂರ್ಣ ಸತ್ಯವಲ್ಲ. ಅದರ ಸೂಕ್ಷ್ಮತೆಗಳನ್ನು ಸತ್ಯಕ್ಕೆ ದೂರವಾಗಿರಿಸಿಕೊಂಡು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ರಚಿಸಲಾಗಿದೆ. ಯಾಕೆಂದರೆ ಇದರಲ್ಲಿ ಕೋಟಿ ಚೆನ್ನಯ್ಯರು ಹುಟ್ಟಿದ ಬಳಿಕದ ವಿಷಯಗಳು ಮಾತ್ರ ಇವೆ. ಆದರೆ ಐನೂರು ವರ್ಷಗಳ ಹಿಂದಿನ ಪ್ರಾಚೀನವಾದ ತುಳು ಭಾಷೆ ಅದರೊಳಗಿಲ್ಲ ಎಂದು ಬಾಬುಶಿವ ಪೂಜಾರಿ ಹೇಳಿದರು.