ಉಡುಪಿ: ಹಿಂದೂಗಳ ಜಾಗದಲ್ಲಿರುವ ದರ್ಗಾ ಕಾಪು ಸಮುದ್ರ ಕಿನಾರೆಯಲ್ಲಿರುವ ಸಯ್ಯದ್ ಅರಭೀ ವಲಿಯುಲ್ಲಾಹಿರವರ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿನ ವಾರ್ಷಿಕ ಸಫರ್ ಝಿಯಾರತ್’ (ಉರೂಸ್) ಸಮಾರಂಭವು ಸಂಭ್ರಮದಿಂದ ನಡೆಯಿತು. ಇದರಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಕೂಡ ಭಾಗಿಯಾಗುತ್ತಾರೆ.
ಕಾಪು ಕಡಲ ತಡಿಯಲ್ಲಿ ಮೊಗವೀರ ಸಮಾಜದ ಶ್ರೀಯಾನ್ ಕುಟುಂಬಕ್ಕೆ ಸೇರಿದ ಜಾಗದಲ್ಲಿದೆ ಈ ದರ್ಗಾ. ಕ್ಯಾಲೆಂಡರ್ನ ಸಫರ್ ತಿಂಗಳ ಕೊನೆಯ ಬುಧವಾರ ಸಫರ್ ಝಿಯಾರತ್ ನಡೆಯುತ್ತದೆ. ಇದರಲ್ಲಿ ಉಡುಪಿ ಮಾತ್ರವಲ್ಲದೇ ಕೇರಳದಿಂದ ಭಟ್ಕಳದವರೆಗಿನ ಸಹಸ್ರಾರು ಮಂದಿ ಮುಸ್ಲಿಮರು ಭಾಗವಹಿಸುತ್ತಾರೆ.

ಹಿಂದೂ ಮತ್ತು ಕ್ರೈಸ್ತರು ಕೂಡ ಭಾಗವಹಿಸಿ ತಮ್ಮ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ. ಸುಮಾರು 150 ವರ್ಷಗಳ ಇತಿಹಾಸ ಇರುವ ಈ ದರ್ಗಾದ ಉರೂಸ್ ಕಾಪು ಜಾಮಿಯಾ ಮಸೀದಿಯ ಆಡಳಿತ ಮಂಡಳಿ ಮತ್ತು ವಾರ್ಷಿಕ ಉರೂಸ್ ಕಮಿಟಿಯ ಉಸ್ತುವಾರಿಯಲ್ಲಿ ನಡೆಯುತ್ತದೆ. ಉಳಿದ ದಿನಗಳಲ್ಲಿ ದರ್ಗಾದ ಒಳಗೆ ಪ್ರತೀ ದಿನ ಸ್ಥಳೀಯ ಹಿಂದೂಗಳೇ ದೀಪ ಹಚ್ಚುವುದು ಇಲ್ಲಿನ ವೈಶಿಷ್ಟವಾಗಿದೆ.
ವಾರ್ಷಿಕ ಉರೂಸ್ ಸಂದರ್ಭದಲ್ಲಿ ಬರುವ ಭಕ್ತರೆಲ್ಲರಿಗೂ ಸಿಹಿ ಗಂಜಿ (ಪಾಯಸ) ಪ್ರಸಾದ ವಿತರಿಸಲಾಗುತ್ತದೆ. ಈ ಪ್ರಸಾದಕ್ಕೆ ಸ್ಥಳೀಯ ಹಿಂದೂಗಳು ಕೂಡ ಸಾಮಗ್ರಿಗಳನ್ನು ನೀಡುತ್ತಾರೆ. ಬೆಲ್ಲ, ಅಕ್ಕಿ ಮಂಡಕ್ಕಿ ಮಲ್ಲಿಗೆ ಮತ್ತು ಖರ್ಜೂರ ಇಲ್ಲಿಗೆ ಸಮರ್ಪಿಸುವ ವಿಶೇಷ ಹರಕೆಗಳಾಗಿದ್ದು ಭಕ್ತರಿಗೆ ಇದನ್ನು ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ.












