ಹಿಂದೂ ಧರ್ಮದ ರಕ್ಷಣೆ ದೊಡ್ಡ ಮಟ್ಟದಲ್ಲಿ ಆಗಬೇಕಿದೆ: ಸುನಿಲ್‌ ಕುಮಾರ್

ಉಡುಪಿ: ಪ್ರಸ್ತುತ ಹಿಂದೂ ಧರ್ಮ ರಕ್ಷಣೆಯ ಕೆಲಸ ದೊಡ್ಡಮಟ್ಟದಲ್ಲಿ ಆಗಬೇಕಿದ್ದು, ಅದು ಕೃಷ್ಣನೂರಿನಿಂದಲೇ ಆರಂಭ ಆಗಬೇಕು ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ‌ ರಾಜಾಂಗಣದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸಿಎಎ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ. ಪ್ರಸ್ತುತ ದೇಶ ಹಾಗೂ ನಮ್ಮ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಹಿಂದೂ ಧರ್ಮದ ರಕ್ಷಣೆ ಮಾಡುವುದು ಎಷ್ಟು ಅವಶ್ಯಕ ಎನ್ನುವುದನ್ನು ತಿಳಿಯಬಹುದು ಎಂದರು.
ಹಿಂದೂ ಸಮಾಜವನ್ನು ಎತ್ತಿಹಿಡಿಯುವ ಕೆಲಸ ಆಗಬೇಕಿದ್ದು, ಅದು ಸಮಾಜದ ಎಲ್ಲ ದಿಕ್ಕಿನಿಂದಲೂ ಆಗಬೇಕು. ಮಹಾಭಾರತದಲ್ಲಿ ಶ್ರೀಕೃಷ್ಣ ನೇತೃತ್ವ ವಹಿಸಿದಂತೆ ಇಂದು ಧರ್ಮದ ರಕ್ಷಣೆಗಾಗಿ ಪರ್ಯಾಯ ಅದಮಾರು ಶ್ರೀಗಳು ನೇತೃತ್ವ ವಹಿಸಿಕೊಳ್ಳಬೇಕು. ಮನೆ ಮನೆಗಳಲ್ಲಿ ಧರ್ಮದ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ರಘುಪತಿ ಭಟ್‌, ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಉದ್ಯಮಿಗಳಾದ ಗುರ್ಮೆ ಸುರೇಶ್‌ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.