ಉಡುಪಿ: ಇಲ್ಲಿನ ಸರ್ವಿಸ್ ಬಸ್ ನಿಲ್ದಾಣದ ಬಳಿ ಲಾಡ್ಜ್ ಒಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಇಂದು ಬಂಧಿಸಿದ್ದು, ಇಬ್ಬರು ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ.
ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಪಕ್ಕಾ ಮಾಹಿತಿ ಮೇರೆಗೆ ಉಡುಪಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಮತ್ತು ಅವರ ತಂಡ ಶುಕ್ರವಾರ ದಾಳಿ ನಡೆಸಿ, ಇಬ್ಬರು ಹುಡುಗಿಯರು ಮತ್ತು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗುರುರಾಜ್, ವಿಜಯ ಶೆಟ್ಟಿ, ಹೇಮಂತ್, ಸಂದೀಪ್ ಮೊಗವೀರ ಎಂದು ಗುರುತಿಸಲಾಗಿದೆ. ಲಾಡ್ಜ್ ಮಾಲೀಕ ರಮೇಶ್ ಶೆಟ್ಟಿ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ಕೆಲವು ಸಮಯದಿಂದ ಇಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದ್ದು, ಅದರ ಆಧಾರದಲ್ಲಿ ದಾಳಿ ನಡೆಸಿದ್ದಾರೆ.
ಈ ಯಾತ್ರಿ ನಿವಾಸ್ ಲಾಡ್ಜ್ ಉಡುಪಿ ನಗರಸಭೆಗೆ ಸೇರಿದ್ದು, ಈ ಲಾಡ್ಜ್ ನ್ನು ರಮೇಶ್ ಶೆಟ್ಟಿ ಎಂಬಾತ ನಡೆಸುತ್ತಿದ್ದ ಎನ್ನಲಾಗಿದೆ. ನಗರಸಭೆಯವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.