ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಜೋರು ಬೀಸಿದ ಬಿರುಗಾಳಿಯ ಹೊಡೆತಕ್ಕೆ ಕುಕ್ಕಿಕಟ್ಟೆಯ ಗ್ರಾಮ ಆಡಳಿತ ಕಚೇರಿಗೆ ಬೃಹತ್ ಮರ ಉರುಳಿ ಬಿದ್ದಿದೆ. ಮಾತ್ರವಲ್ಲದೆ ಇಂದಿರಾನಗರದಲ್ಲಿ ತೆಂಗಿನಮರ ಬಿದ್ದು ಆಟೋ ರಿಕ್ಷಾ ಹಲವು ವಿದ್ಯುತ್ ಕಂಬ ಮತ್ತು ಮನೆಗೆ ಹಾನಿ ಆಗಿದೆ.
ಜಿಲ್ಲೆಯಲ್ಲಿ 30ಕ್ಕೂ ಅಧಿಕ ಮನೆಗಳು ಗಾಳಿ-ಮಳೆಯಿಂದ ಹಾನಿ ಗೊಳಗಾಗಿವೆ. ಬ್ರಹ್ಮಾವರ ತಾಲೂಕು ಗಿಳಿಯಾರಿನ ಸೀತಾರಾಮ ದೇವಾಡಿಗ ಎಂಬವರ ಮನೆ ಸಂಪೂರ್ಣ ಹಾನಿಗೊಂಡಿದ್ದು 2.50 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಿದ್ದರೆ, ಉಳ್ಳೂರು ಗ್ರಾಮದ ಪ್ರಕಾಶ್ ಶೆಟ್ಟಿ ಅವರ ಮನೆಗೆ ಎರಡು ಲಕ್ಷ ರೂ. ನಷ್ಟ ಉಂಟಾದ ವರದಿ ಇದೆ.
ಉಳಿದಂತೆ ಬ್ರಹ್ಮಾವರ ತಾಲೂಕಿನ ಚಾಂತಾರು, ಹೆಗ್ಗುಂಜೆ, ಕಾರ್ಕಳ ತಾಲೂಕಿನ ಪಳ್ಳಿ, ಕಾಪು ತಾಲೂಕಿನ ಉಳಿಯಾರಗೊಳಿ, ಕುಂದಾಪುರ ತಾಲೂಕಿನ ಕಂದಾವರ, ಕುಂಭಾಶಿ, ಕುಂದಾಪುರ ಕಸಬ, ಬಸೂರಿನ ಗುಂಡಿಗೊಳಿ, ಆನಗಳ್ಳಿ, ಬಾದಾಮಿ ಕಟ್ಟೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.












