ಉಡುಪಿ: ಜಿಲ್ಲೆಯ ಕಾಪು ತಾಲ್ಲೂಕಿನ ಎರ್ಮಾಳ್ ಗ್ರಾಮದ ಅಡ್ವೆಕೋಡಿ ಪ್ರದೇಶದ ತಾರಾನಾಥ್ ಎಂಬುವರ ಕುಟುಂಬ ನೆರೆ ನೀರಿನಲ್ಲೇ ನಡೆದುಕೊಂಡು ಬಂದು ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿದು ಸ್ವತಃ ತಹಶಿಲ್ದಾರ್ ಅಲ್ಲಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಶೀಘ್ರ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಾರೆ.
ಒದ್ದೆಬಟ್ಟೆಯಲ್ಲೇ ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು:
ತಾರಾನಾಥ್ ರವರ ಮಕ್ಕಳಾದ ಪ್ರಜ್ಞಾ ಮತ್ತು ಪ್ರಜ್ವಲ್ ಕಾಲೇಜಿಗೆ ಹೋಗುವಾಗ ಈ ಎದೆ ಮಟ್ಟದ ನೆರೆ ನೀರಿನಲ್ಲೇ ತೊಯ್ದುಕೊಂಡು ಹೋಗಬೇಕು. ಪುಸ್ತಕದ ಚೀಲವನ್ನೂ ಹೊತ್ತೊಯ್ಯಬೇಕು. ಇದೇ ಸ್ಥಿತಿಯಲ್ಲಿ ಕಾಲೇಜು ತಲುಪಬೇಕಾದ ಸಂಕಷ್ಟ ಇದೆ. ಜೀವಭಯದಿಂದ ಕಾಲೇಜಿಗೆ ಹೋಗಬೇಕಾಗಿದೆ.
ಮಳೆಗಾಲದ ಸಂಕಷ್ಟ: ಸಾಮಾನು-ದಿನಸಿಯನ್ನೂ ನೀರಿನಲ್ಲಿ ಮುಳುಗಿಕೊಂಡೇ ತರಬೇಕು:
ತಾರಾನಾಥ್ ರವರು ಮನೆಗೆ ದಿನಸಿ ಸಾಮಾನು, ಅಗತ್ಯ ವಸ್ತುಗಳನ್ನು ತರುವುದಕ್ಕೂ ಇದೇ ನೆರೆ ನೀರಿನಲ್ಲೇ ಈಜಿಕೊಂಡು ಹೋಗಬೇಕಿದೆ.
ತಹಶಿಲ್ದಾರ್ ಸ್ವತಃ ಇದೇ ಎದೆಮಟ್ಟದ ನೆರೆ ನೀರಿನಲ್ಲಿ ತೆರಳಿ ಪರಿಶೀಲನೆ:
ಇವರ ಸಮಸ್ಯೆ ಬಗ್ಗೆ ತಿಳಿದ ತಹಶಿಲ್ದಾರ್ ಪ್ರತಿಭಾ ಆರ್ ಸ್ವತಃ ಈ ಪ್ರದೇಶಕ್ಕೆ ತೆರಳಿದ್ದಾರೆ. ನುರಿತವರೇ ಇಷ್ಡು ಆಳದ ನೀರಿನಲ್ಲಿ ಇಳಿಯಲು ಹೆದರುವಾಗ ಸ್ವತಃ ತಹಶಿಲ್ದಾರ್ ಮೇಡಂ ಎದೆಮಟ್ಟದ ನೀರಿನಲ್ಲೇ ಧೈರ್ಯದಿಂದ ಹೆಜ್ಜೆ ಇಡುತ್ತಾ ಆ ಒಂಟಿ ಮನೆ ತಲುಪಿ ಆ ಕುಟುಂಬವನ್ನು ಭೇಟಿಯಾಗಿದ್ದಾರೆ. ಕುಟುಂಬದ ಪರಿಸ್ಥಿತಿಯನ್ನು ಕಂಡು ಸಾಂತ್ವನ ಹೇಳಿದ್ದಾರೆ. ಶೀಘ್ರವೇ ಈ ನೆರೆ ಇಳಿಸುವ ಪರಿಹಾರ ಕಂಡು ಹುಡುಕುವುದಾಗಿ ಭರವಸೆ ನೀಡಿದ್ದಾರೆ.
ಕಾಮಿನಿ ನದಿಯ ಹೂಳೆತ್ತಿ ಸ್ವಚ್ಚಗೊಳಿಸಿದರೆ ಈ ನೆರೆಗೆ ಪರಿಹಾರ ಸಿಗುತ್ತದೆ:
ಸಮೀಪದ ಕಾಮಿನಿ ನದಿ ಪಡುಬಿದ್ರಿಯ ಕಡೆಯಿಂದ ಹರಿದು ಸಮುದ್ರಕ್ಕೆ ಸೇರುತ್ತದೆ. ಅಲ್ಲಿ ಹೂಳು ತುಂಬಿಕೊಂಡು ಕಸ ಸೇರಿಕೊಂಡು ಕಲ್ಮಶ ತುಂಬಿಕೊಂಡಿರುವ ಕಾರಣ ಅಡ್ವೆಕೋಡಿಯ ಗದ್ದೆಗಳಲ್ಲಿ ಜಲಾವೃತವಾಗುತ್ತದೆ. ಇದರಿಂದಲೇ ಈ ಕುಟುಂಬ ಸಂಕಷ್ಟ ಅನುಭವಿಸಬೇಕಿದೆ. ತಹಶಿಲ್ದಾರ್ ಪ್ರತಿಭಾ ಆರ್. ರವರು ಈ ಕೂಡಲೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕಾಮಿನಿ ನದಿ ಸ್ವಚ್ಚಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿನಿಯ ಹೇಳಿಕೆ:
ನಾನು ಪಿಯುಸಿ ಓದುತ್ತಿದ್ದೇನೆ. ದಿನಾಲು ಇದೇ ನೆರೆ ನೀರಿನಲ್ಲಿಯೇ ಕಾಲೇಜಿಗೆ ತೆರಳಬೇಕು. ಬಟ್ಟೆ ಒದ್ದೆಯಾಗುತ್ತದೆ. ಬೇರೆ ಕಡೆ ಹೋಗಿ ಬಟ್ಟೆ ಬದಲಿಸಕೊಂಡು ತರಗತಿಗೆ ತೆರಳಬೇಕು. ಒಮ್ಮೊಮ್ಮೆ ಒದ್ದೆ ಬಟ್ಟೆಯಲ್ಲಿಯೇ ತರಗತಿಗೆ ಹೋಗಿದ್ದಿದೆ. ಪುಸ್ತಕಗಳನ್ನು ತೋಯದ ಹಾಗೆ ಕಾಪಾಡಿಕೊಂಡು ತರುವುದು ಕಷ್ಟದ ಕೆಲಸ. ಮನೆಗೆ ಸಾಮಾನುಗಳನ್ನು ತರುವುದೂ ಕಷ್ಟದ ಕೆಲಸ. ಇದಕ್ಕೆ ಬೇಗ ಏನಾದರೂ ಪರಿಹಾರ ದೊರಕಿಸಿಕೊಡಿ ಮೇಡಂ” ಎಂದು ತಹಶಿಲ್ದಾರ್ ಪ್ರತಿಭಾ ರವರಲ್ಲಿ ಅಳಲು ತೋಡಿಕೊಂಡಿದ್ದಾರೆ.
ತಹಶಿಲ್ದಾರ್ ಪ್ರತಿಭಾ ಆರ್ ಹೇಳಿಕೆ:
ಇಂದಿನ ಆಧುನಿಕ ಜಗತ್ತಿನಲ್ಲಿಯೂ ಹೀಗೆ ವಿದ್ಯಾರ್ಥಿಗಳು ನೀರಿನಲ್ಲಿ ತೇಲಾಡಿಕೊಂಡು, ಈಜಿಕೊಂಡು ಕಾಲೇಜಿಗೆ ಹೋಗಬೇಕಾದ ಅನಿವಾರ್ಯತೆ ಕಂಡು ತಲೆತಗ್ಗಿಸುವಂತಾಗಿದೆ. ನಾನೂ ಸ್ವತಃ ಇದೇ ನೆರೆಯಲ್ಲಿ ಇಳಿದು ಅವರ ಮನೆ ತಲುಪಿ ಸಾಂತ್ವನ ಹೇಳಿರುತ್ತೇನೆ. ನಿಜಕ್ಕೂ ಆತಂಕದ ಪರಿಸ್ಥಿತಿ ಇರುತ್ತದೆ. ಸಮೀಪದ ಕಾಮಿನಿ ನದಿಯಲ್ಲಿನ ಹೂಳು ಮತ್ತು ಕಸದಿಂದಾಗಿ ಈ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾಮಿನಿ ನದಿಯ ಸ್ವಚ್ಚತಾ ಕಾರ್ಯ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ತಾಲ್ಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ರೆಡಿ ಇಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಶಿಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ (0820-2551444).
ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












