ಉಡುಪಿ:ಜನಸಾಮಾನ್ಯರು ಉತ್ತಮ ಆರೋಗ್ಯ ಹೊಂದಲು ಜಾರಿಗೊಳಿಸಲಾದ ಕಾರ್ಯಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿ:ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಅನೇಕ ಯೋಜನೆಗಳು
ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದರೊಂದಿಗೆ ಜನರು ಉತ್ತಮ
ಆರೋಗ್ಯ ವಹಿಸುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಾರ್ವಜನಿಕರು ಯಾವುದೇ ರೋಗ ಬಂದು ಚಿಕಿತ್ಸೆ ಪಡೆಯುವ ಬದಲು ರೋಗಗಳು ಹರಡದಂತೆ ಜನಸಾಮಾನ್ಯರಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ
ತಿಳಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಚಾರ ಪಡಿಸಬೇಕು. ಒಂದೊಮ್ಮೆ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಅವುಗಳ ಬಗ್ಗೆ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆಯ ಅಧಿಕಾರಿಗಳು, ನೌಕರರು ಹಾಗೂ ಆಶಾ ಕಾರ್ಯಕರ್ತರುಗಳು ಕ್ರಮವಹಿಸಬೇಕು ಎಂದರು.

ಹೆಣ್ಣು ಮಕ್ಕಳು ಗರ್ಭೀಣಿಯಾದ ಪ್ರಥಮ ಹಂತದಲ್ಲಿಯೇ ಅವರುಗಳಿಗೆ ತಾಯಿ ಕಾರ್ಡ್ ಅನ್ನು ನೀಡುವುದರೊಂದಿಗೆ ಕಾಲಕಾಲಕ್ಕೆ ಅವರು
ಆರೋಗ್ಯ ತಪಾಸಣೆ ಮಾಡುವುದು, ಪೌಷ್ಠಿಕ ಆಹಾರಗಳ ಸೇವನೆಯ ಬಗ್ಗೆ ಅರಿವು ಮೂಡಿಸುವುದು ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ
ನೀಡಿದ್ದಲ್ಲಿ ತಾಯಿ ಮತ್ತು ಮಕ್ಕಳ ಮರಣ ಸಂಖ್ಯೆಯನ್ನು ಮುಕ್ತಗೊಳಿಸಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕು ಎಂದ ಅವರು, ಸಣ್ಣ ಮಕ್ಕಳಿಗೆ ಕಾಲಕಾಲಕ್ಕೆ ರೋಗ ನಿರೋಧಕ ಶಕ್ತಿ ಸುಧಾರಿಸಲು ನೀಡುವ ಚುಚ್ಚುಮದ್ದುಗಳನ್ನು ತಪ್ಪದೇ ನೀಡುವುದರೊಂದಿಗೆ ಪ್ರತಿಶತಃ ನೂರರಷ್ಟು ಸಾಧನೆ ಮಾಡಬೇಕು ಎಂದರು.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ರೋಗವು ಕಂಡುಬರುತ್ತದೆ. ಈ ರೋಗವು ಕಾಡಿನಲ್ಲಿ ಮಂಗಗಳು ಸತ್ತು ಅದರಿಂದ
ಉಂಟಾಗುವ ಉಣ್ಣೆಗಳ ಕಡಿಯುವಿಕೆಯಿಂದ ಬರುತ್ತದೆ. ಕಾಡಂಚಿನಲ್ಲಿ ವಾಸಿಸುವ ಜನರಿಗೆ ಈ ರೋಗದ ಹರಡುವಿಕೆ ಹಾಗೂ ಚಿಕಿತ್ಸಾ ಕ್ರಮಗಳ
ಬಗ್ಗೆ ವ್ಯಾಪಕ ಪ್ರಚಾರವನ್ನು ಅರಣ್ಯ ಇಲಾಖೆ, ಪಶುಪಾಲನಾ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್‌ಗಳು ಹಾಗೂ ಆರೋಗ್ಯ ಇಲಾಖೆಯ
ಅಧಿಕಾರಿಗಳು ಸಮನ್ವಯದೊಂದಿಗೆ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಈವರೆಗೆ 7475 ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಉಂಟಾಗಿವೆ ಹಾಗೂ 194 ಹಾವು ಕಡಿತ
ಪ್ರಕರಣಗಳು ಆಗಿವೆ. ಈ ಪ್ರಕರಣಗಳ ನಿಯಂತ್ರಣಕ್ಕೂ ಸಹ ಸೂಕ್ತ ಕ್ರಮವನ್ನು ವಹಿಸಬೇಕು. ಇವುಗಳಿಂದ ತೊಂದರೆ ಉಂಟಾದವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಆವಶ್ಯವಿರುವ ಔಷಧಿ ಹಾಗೂ ಲಸಿಕೆಗಳನ್ನು ಶೇಖರಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳು ಲಭಿಸುವಂತೆ ಕ್ರಮ ವಹಿಸಬೇಕು.ಅಪಘಾತದಂತಹ ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಯುವಿಕೆಗೆ ಚಿಕಿತ್ಸೆಯನ್ನು ಅದ್ಯತೆಯ ಮೇಲೆ ಆಸ್ಪತ್ರೆಗಳು ನೀಡಬೇಕು. ಇದನ್ನು ಉಲ್ಲಂಘಿಸಿದಲ್ಲಿ ಕೆ.ಪಿ.ಎಂ ನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದ ಅವರು, ಖಾಸಗೀ ಆಸ್ಪತ್ರೆಗಳು ಸರ್ಕಾರದ ನಿಯಮಾನುಸಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಬೆಡ್‌ಗಳನ್ನು ಮೀಸಲಿರಿಸಿ, ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.

ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಶಂಕಿತ ನ್ಯೂಮೋನಿಯಾ ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವೆಂಬರ್ 12 ರಿಂದ 2026 ರ ಫೆಬ್ರವರಿ 28 ರ ವರೆಗೆ ಎಸ್.ಎ.ಎ.ಎನ್.ಎಸ್ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.ಈ ಅಭಿಯಾನದ ಮೂಲಕ ನ್ಯೂಮೋನಿಯಾ ಪ್ರಕರಣವನ್ನು ಶೂನ್ಯಕ್ಕೆ ತರಲು ಪ್ರಯತ್ನಿಸಬೇಕು ಎಂದರು.

ಎಂಡೋಸಲ್ಫಾನ್ ಪೀಡಿತರಿಗೆ ಅಗತ್ಯವಿರುವ ಉಚಿತ ಆರೋಗ್ಯ ಸೇವೆಗಳು ಸೇರಿದಂತೆ ಇತರೆ ಸೌಲಭ್ಯಗಳನ್ನು ತಪ್ಪದೇ ಕಲ್ಪಿಸಬೇಕು. ಹಾಸಿಗೆ ಹಿಡಿದ ಎಂಡೋಸಲ್ಫಾನ್ ಪೀಡಿತರ ಬಳಿ ಸಂಚಾರಿ ಮೊಬೈಲ್ ಘಟಕ ವಾಹನಗಳ ಮೂಲಕ ತೆರಳಿ ಅವರುಗಳು ಇರುವಲ್ಲಿಯೇ ಫಿಸಿಯೋಥೆರಪಿ ನಡೆಸಿ, ಸೂಕ್ತ ಆರೈಕೆ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಬಾಲ್ಯದ ನ್ಯೂಮೋನಿಯಾವನ್ನು ತಡೆಗಟ್ಟುವ ನಿಟ್ಟಿನಲ್ಲಿ 2025 ರ ನವೆಂಬರ್ 12 ರಿಂದ 2026 ರ ಫೆಬ್ರವರಿ 28 ರವರೆಗೆ ನಡೆಯಲಿರುವ ನ್ಯೂಮೋನಿಯಾವನ್ನು ಆರಂಭಿಕ ಗುರುತಿಸುವಿಕೆ ಮತ್ತು ನವಜಾತ ಶಿಶುಗಳಲ್ಲಿ ನ್ಯೂಮೋನಿಯಾವನ್ನು ಸೂಕ್ತ ನಿರ್ವಹಣೆ ಮಾಡುವ ಮಾಹಿತಿಯನ್ನು ಒಳಗೊಂಡ ಭಿತ್ತಿಪತ್ರವನ್ನು ಹಾಗೂ ಕುಷ್ಟರೋಗ ಪ್ರಕರಣ ಪತ್ತೆಹಚ್ಚುವ ಆಂದೋಲನ ಕುರಿತ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್
ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ
ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.