ಹೆಚ್1ಎನ್1- ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ

ಉಡುಪಿ: ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಕಡೆ ಹೆಚ್ಚಾಗಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರನ್ನು ಪರೀಕ್ಷಿಸಿದಾಗ ಹೆಚ್1ಎನ್1 ಸೋಂಕು ಪತ್ತೆಯಾಗಿರುವುದು ಕಂಡು ಬಂದಿದ್ದು, ತಾಲೂಕಿನಲ್ಲಿಯೂ ಕೆಲವೊಂದು ಪ್ರಕರಣಗಳು ವರದಿಯಾಗುತ್ತಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೆಚ್1ಎನ್1 ಕುರಿತು ಮಾಹಿತಿಯುಳ್ಳ ಕರ ಪತ್ರಗಳನ್ನು ವಿತರಿಸುವ ಹಾಗೂ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು ಹೆಚ್1ಎನ್1 ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಹೆಚ್1ಎನ್1 ಇನ್‍ಪ್ಲೂಯೆಂಜಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ ಸೀನಿದಾಗ ಈ ವೈರಸ್ ಹರಡುತ್ತದೆ.

ಮುಂಜಾಗೃತ ಕ್ರಮಗಳು:

ಕೆಮ್ಮುವಾಗ ಅಥವಾ  ಸೀನುವಾಗ ಬಾಯಿ ಮತ್ತು ಮೂಗಿಗೆ ಕರವಸ್ತ್ರವನ್ನು ಅಡ್ಡವಾಗಿ ಇಡುವುದು ಮತ್ತು ಉಪಯೋಗಿಸಿದ ಕರವಸ್ತ್ರವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು. ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈ ತೊಳೆಯದೇ ಮುಟ್ಟಬಾರದು.  ಅತಿಯಾಗಿ ಜನಸಂದಣಿ ಇರುವ ಸ್ಥಳದಲ್ಲಿ ಹೋಗುವುದನ್ನು ತಪ್ಪಿಸುವುದು. ಫ್ಲೂ, ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರಬೇಕು. ರಸ್ತೆಯಲ್ಲಿ ಅಥವಾ ಜನವಿರುವ ಪ್ರದೇಶದಲ್ಲಿ ಉಗುಳಬಾರದು. ವೈದ್ಯರ ಸಲಹೆ ಇಲ್ಲದೆ ಔಷಧಿ ತೆಗೆದು ಕೊಳ್ಳಬಾರದು. ವೈಯಕ್ತಿಕ ಸ್ವಚ್ಚತೆ ಪಾಲಿಸಿ, ಸ್ನಾನ ಮಾಡಿ ಶುಭ್ರ ಭಟ್ಟೆ ಧರಿಸುವುದು.

ಹೆಚ್1ಎನ್1 ಲಕ್ಷಣಗಳು:

ಉಸಿರಾಟದ ತೊಂದರೆ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ಮೈ ಕೈ ನೋವು, ಚಳಿ, ಸುಸ್ತು, ಚರ್ಮದ ಅಥವಾ ತುಟಿಗಳ ನೀಲಿ ಬಣ್ಣ, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು ಈ ರೀತಿ ಲಕ್ಷಣಗಳು ಕಂಡುಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಬೇಕು ಅಥವಾ ಆರೋಗ್ಯ ಕಾರ್ಯಕರ್ತರು / ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸುವಂತೆ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.