ಗಿರೀಶ್ ಐತಾಳರಿಗೆ “ಕನ್ನಡ ಕಣ್ಮಣಿ ಪ್ರಶಸ್ತಿ” ಪ್ರದಾನ

ಉಡುಪಿ: ಉಡುಪಿಯ ನ್ಯಾಯವಾದಿ ಗಿರೀಶ ಐತಾಳ ಅವರು ಸಲ್ಲಿಸಿರುವ ಸಮಾಜ ಸೇವೆಗಾಗಿ ಸುರ್ವೆ ಕಲ್ಚರಲ್ ಅಕಾಡೆಮಿಯು ಡಿ. 13ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಸುರ್ವೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಹಿರಿಯ ಪತ್ರಕರ್ತ ರಮೇಶ್ ಸುರ್ವೆ, ಮಾಜಿ ಸಚಿವರಾದ ರಾಮಚಂದ್ರ ಗೌಡ, ನೆ.ಲ. ನರೇಂದ್ರಬಾಬು, ಹಿರಿಯ ಚಲನಚಿತ್ರ ಕಲಾವಿದರಾದ ಬ್ಯಾಂಕ್ ಜನಾರ್ದನ್, ಮೀನಾ, ಬೆಂಗಳೂರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿ ಉಪಸ್ಥಿತರಿದ್ದರು.
ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಭಾರತ ವಿಕಾಸ ರತ್ನ, ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಐತಾಳರು ಪ್ರತಿ ತಿಂಗಳ ಎರಡನೇ ಶನಿವಾರ ಉಚಿತ ಕಾನೂನು ಮಾಹಿತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಅಂತರ್ಜಾತಿ ಅಂತರ್ ಧರ್ಮ ವಿವಾಹಕ್ಕೆ ಸಹಕಾರ ಮತ್ತು ಈವರೆಗೆ 188 ಜೋಡಿಗಳ ವಿವಾಹವನ್ನು ಆಯೋಜಿಸಿದ್ದಾರೆ. 218 ಕುಟುಂಬಗಳಿಗೆ ಗೃಹ ನಿರ್ಮಾಣ ಸಾಲ ಮಾಡಿಸಿ ಕೊಟ್ಟಿದ್ದಲ್ಲದೆ, 18 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ, ಅಂಗವಿಕಲರಿಗೆ ಸಹಾಯ ಧನ ನೀಡಿದ್ದಾರೆ.