ಗರೋಡಿಗಳ ಯಜಮಾನಿಕೆಯನ್ನು ಬೇರೆ ಜನಾಂಗದವರಿಗೆ ಕೊಡುವುದು ಸರಿಯಲ್ಲ

ಉಡುಪಿ: ಗರೋಡಿಗಳಲ್ಲಿ ಬೇರೆ ಜನಾಂಗದವರಿಗೆ ಗೌರವ ಕೊಡಿ. ಆದರೆ ಅವರಿಗೆ ಯಜಮಾನಿಕೆ ಸ್ಥಾನವನ್ನು ಕೊಡುವುದು ಸರಿಯಲ್ಲ ಎಂದು ಹಿರಿಯ ಜಾನಪದ ವಿದ್ವಾಂಸ ಬಾಬುಶಿವ ಪೂಜಾರಿ ಹೇಳಿದರು.
ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಆದಿಉಡುಪಿಯ ಬೈದಶ್ರೀ ಕಾರ್ಯಾಲಯದಲ್ಲಿ ಬುಧವಾರ ನಡೆದ ಬೈದಶ್ರೀ ಸಾಹಿತ್ಯ ಪ್ರಶಸ್ತಿ ಹಾಗೂ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ತುಳು ಜನಾಂಗ, ತುಳು ಆರಾಧನ ಪದ್ಧತಿಗಳನ್ನು ತಮ್ಮದಲ್ಲವೆಂದು ಹೇಳುತ್ತಿದ್ದ ಮೇಲ್ವಗರ್ದವರು, ಇಂದು ಅವುಗಳು ತಮ್ಮದೆಂದು ವಾದಿಸುತ್ತಿದ್ದಾರೆ. ಅವರಿಗೆ ಬೇಕಾದಂತೆ ಅದರಲ್ಲಿ ಪರಿವರ್ತನೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ನಮ್ಮ ಕೋಟಿ ಚೆನ್ನಯ್ಯರ ಅಸ್ಥಿತ್ವ ಎಲ್ಲಿಗೆ ಹೋಯಿತು. ಯಾವ ಜನಾಂಗದಲ್ಲಿ ಕೋಟಿ ಚೆನ್ನಯ್ಯರು ಹುಟ್ಟಿ ಬಂದಿದ್ದರೋ ಆ ಜನಾಂಗ ಈಗ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಬಿಲ್ಲವ ಜನಾಂಗ ಕೇವಲ ಗರೋಡಿಗಳ ಚಾಕರಿ, ಪೂಜೆ ಮಾಡಲು ಸೀಮಿತವಾಗಿದ್ದು, ಅಧಿಕಾರ ಮೇಲ್ವರ್ಗದ ಕೈಯಲ್ಲಿದೆ ಎಂದು ದೂರಿದರು.
ಪ್ರಾಚೀನ ಕಾಲದಲ್ಲಿ ಜಾನಪದವನ್ನು ಜಾಣರು (ಮೇಲ್ವರ್ಗದವರು) ತಮ್ಮದಾಗಿಸಿಕೊಂಡು, ಅದನ್ನು ಲಿಪಿಕರಣ ಮಾಡಿ ಅದಕ್ಕೆ ಮಹಾಕಾವ್ಯ, ಪುರಾಣಗಳನ್ನು ಬರೆದರು. ಜಾನಪದ ಯಾವಾಗ ಲಿಪಿಕರಣವಾಯಿತೋ, ಅಂದಿನಿಂದ ಅದು ಪ್ರಭುತ್ವದ ಆಳ್ವಿಕೆಗೆ ಒಳಪಟ್ಟಿತು. ನಾವು ಆರಾಧಿಸುವ ಜಾನಪದ, ಸಂಸ್ಕೃತಿ ತಳಮಟ್ಟ ಹಾಗೂ ತಳ ಸಮುದಾಯದ ಪರಿದಿಯಲ್ಲಿದ್ದು, ಅದನ್ನು
ಯಾರು ಕೇಳುವವರಿಲ್ಲ. ಇದಕ್ಕೆ ಸರ್ಕಾರ, ಪ್ರಭುತ್ವ ಹಾಗೂ ಮೇಲ್ವರ್ಗದವರ ಸಹಕಾರ ಕೂಡ ದೊರಕಿಲ್ಲ ಎಂದರು.
ಇಂದು ಆ ಪರಿದಿಯನ್ನು ಮೇಲ್ವರ್ಗದವರು ತಮ್ಮ ಆಳ್ವಿಕೆಯ, ಶೋಷಣೆಯ ಆಯುಧವನ್ನಾಗಿ ಮಾಡಿಕೊಂಡಿದ್ದು, ತಮಗೆ ಬೇಕಾದ ಹಾಗೆ ಬದಲಾಯಿಸಿಕೊಂಡಿದ್ದಾರೆ. ಅದರ ಹತ್ತಿರಕ್ಕೂ ನಮ್ಮನ್ನು ಸುಳಿಯಲು ಬಿಡುತ್ತಿಲ್ಲ. ನಾವು ಅದರ ಅಧೀನದಲ್ಲಿರಬೇಕು. ನಾವು ಎಲ್ಲಿಯವರೆಗೆ ಅವರ ಅಧೀನದಲ್ಲಿರುತ್ತೇವೋ, ಅಲ್ಲಿಯವರೆಗೆ ನಾವು ಜೀವಂತವಾಗಿರುತ್ತೇವೆ.
ನಮ್ಮ ಜಾನಪದಗಳು ಕೂಡ ಹಾಗೆ ಇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ ಅವರಿಗೆ ಬೈದಶ್ರೀ ಸಾಹಿತ್ಯ ಪ್ರಶಸ್ತಿ, ಹಿರಿಯ ಬೈದ್ಯರ ದರ್ಶನ ಪಾತ್ರಿ ಶ್ರೀನಿವಾಸ ಪೂಜಾರಿ ಹಾಗೂ ಬೈದ್ಯರ ನೃತ್ಯ ವಿಶಾರದರು ಉಗ್ಗಪ್ಪ ಪರವ ಅವರಿಗೆ ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಮತ್ತು ಕಂಕನಾಡಿ ಗರೋಡಿಯ ಮಾಜಿ ಅಧ್ಯಕ್ಷ ಕೆ. ಚಿತ್ತರಂಜನ್‌ ಅವರಿಗೆ ಜೀವಮಾನ ಸಾಧನಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಮಾಜಿ ಶಾಸಕ ಯು.ಆರ್‌. ಸಭಾಪತಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಯನ ಕೇಂದ್ರದ ಕಾರ್ಯದರ್ಶಿ ಮಹೇಶ್‌  ಬಂಗೇರ ಸ್ವಾಗತಿಸಿದರು. ಅಧ್ಯಕ್ಷ ದಾಮೋದರ ಕಲ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.