ಉಡುಪಿ: ಕೊರೊನಾದಿಂದ ಮೃತಪಟ್ಟ ಕ್ರಿಶ್ಚಿಯನ್ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಮತ್ತು ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಕಾರ್ಯಕರ್ತರು ನೆರವೇರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಬಳ್ಳಾರಿಯ ಕ್ರಿಶ್ಚಿಯನ್ ಸಮುದಾಯದ ಮಹಿಳೆಯೊಬ್ಬರು ಆಗಸ್ಟ್ 29 ರಂದು ಮೃತಪಟ್ಟಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಚಿಕಿತ್ಸೆಗೆ ತಮ್ಮಲ್ಲಿದ್ದ ಹಣವನ್ನೆಲ್ಲವನ್ನು ಖರ್ಚು ಮಾಡಿದ್ದು, ಕೊನೆಗೆ ತಾಯಿಯ ಮೃತ ದೇಹವನ್ನು ತಮ್ಮ ಹುಟ್ಟೂರಿಗೆ ಒಯ್ಯಲು ಅಥವಾ ಇಲ್ಲಿಯೇ ಅಂತ್ಯ ಕ್ರಿಯೆ ನೆರವೇರಿಸಲು ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದ ಮೃತ ಮಹಿಳೆಯ ಮೂರು ಪುತ್ರಿಯರು ಕಣ್ಣೀರಿಡುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಜಿ. ಶಂಕರ್ ಫ್ರಾಂಟ್ ಲೈನ್ ವಾರಿಯರ್ಸ್ ಉಡುಪಿ ಸಂಚಾಲಕ ಜಯ ಸಿ ಕೋಟ್ಯಾನ್ ಮತ್ತು ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯದ ಸದಸ್ಯ ಮುನೀರ್ ಕಲ್ಮಾಡಿ ಅವರ ನೇತೃತ್ವದಲ್ಲಿ ಯುವಕರು ಕಾರ್ಯ ಪ್ರವೃತ್ತರಾದರು.
ಪ್ರೊಟೆಸ್ಟೆಂಟ್ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಕಾರ್ಯ ನೆರವೇರಿಸಲು ಉಡುಪಿ ಪರಿಸರದ ಹಲವಾರು ಚರ್ಚ್ ಗಳಲ್ಲಿ ವಿಚಾರಿಸಿದರೂ ಸೂಕ್ತ ಸ್ಪಂದನೆ ದೊರಕದಿದ್ದಾಗ ಉಡುಪಿ ನಗರ ಸಭೆಯ ಆಯುಕ್ತರನ್ನು ಸಂಪರ್ಕಿಸಿ, ಅವರ ಅನುಮತಿಯ ಮೇರೆಗೆ ಮತ್ತು ಮೃತ ಮಹಿಳೆಯ ವಾರೀಸುದಾರರಿಂದ ಲಿಖಿತ ಒಪ್ಪಿಗೆ ಪಡಕೊಂಡು ಉಡುಪಿಯ ಇಂದ್ರಾಳಿಯ ಹಿಂದೂ ರುದ್ರಭೂಮಿಯಲ್ಲಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಹೆಣ್ಣು ಮಕ್ಕಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕ ನಾಡೋಜ ಡಾ ಜಿ ಶಂಕರ್ ಮತ್ತು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ್ ಕೆ. ಎಂ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪುಣ್ಯ ಕಾರ್ಯವು ಜಯ ಸಿ.ಕೋಟ್ಯಾನ್ ಮತ್ತು ಮುನೀರ್ ಕಲ್ಮಾಡಿಯವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರವೀಂದ್ರ ಶ್ರೀಯಾನ್, ಚಂದ್ರೇಶ್ ಪಿತ್ರೋಡಿ, ವಿಠ್ಠಲ್ ಕರ್ಕೇರ ಬೆಳ್ಳಂಪಳ್ಳಿ, ರಫಿಕ್ ದೊಡ್ಡಣ್ಣಗುಡ್ಡೆ ಉಪಸ್ಥಿತರಿದ್ದರು. ರುದ್ರ ಭೂಮಿಯ ಮೇಲ್ವಿಚಾರಕರಾದ ನಾಗಾರ್ಜುನ ಪೂಜಾರಿ ಮತ್ತು ಮನೋಹರ್ ಕರ್ಕಡ ಸಂಪೂರ್ಣ ಸಹಕಾರ ನೀಡಿದರು.