ಉಡುಪಿ: ದೆಹಲಿಯಲ್ಲಿ ಫಾರ್ಮಸಿ ತೆರೆಯುವುದಾಗಿ ನಂಬಿಸಿ ವಂಚಕನೊಬ್ಬ ಮಹಿಳೆಯೊಬ್ಬರಿಂದ ಬರೋಬ್ಬರಿ ₹ 19 ಲಕ್ಷ ಲಪಟಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಲಿನೆಟ್ ಸಿಮಾ ರೊಡ್ರಿಗಸ್ (38) ಹಣ ಕಳೆದುಕೊಂಡ ಮಹಿಳೆ. ಇವರು ಕುವೈಟ್ ದೇಶದಲ್ಲಿ ಉದ್ಯೋಗದಲ್ಲಿದ್ದರು. ಇವರಿಗೆ ಇತ್ತೀಚೆಗೆ ಫೇಸ್ ಬುಕ್ ಮೂಲಕ ಡಾ. ಆ್ಯಂಡ್ರಿವ್ ಫೆಲಿಕ್ಸ್ (ಆರೋಪಿ) ಎಂಬುವವರ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಳ್ಳುವ ಮಟ್ಟಿಗೆ ಮುಂದುವರಿದಿತ್ತು.
ಆರೋಪಿ ಫೆಲಿಕ್ಸ್ ತಾನು ವೃತ್ತಿಯಲ್ಲಿ ವೈದ್ಯನಾಗಿದ್ದು, ನಾನು ದೆಹಲಿಯಲ್ಲಿ ಒಂದು ಫಾರ್ಮಸಿ ತೆರೆಯುವುದಾಗಿ ಹೇಳಿದ್ದನು. ಆತನ ಮಾತು ನಂಬಿದ ಲಿನೆಟಾ, ಹಂತ ಹಂತವಾಗಿ ಆತನ ಖಾತೆಗೆ ಒಟ್ಟು ₹ 19 ಲಕ್ಷ ಮೊತ್ತವನ್ನು ಹಾಕಿದ್ದರು. ಬಳಿಕ ಆರೋಪಿ ಸಂಪರ್ಕ ಕಡಿದುಕೊಂಡು ದೋಖಾ ಮಾಡಿದ್ದನು. ಈ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.