ಉಡುಪಿ:ಸಾಲಿಗ್ರಾಮ ಡಿವೈನ್ ಪಾರ್ಕ್‌ ಸಂಸ್ಥಾಪಕ ಎ.ಚಂದ್ರಶೇಖ‌ರ್ ಉಡುಪ ನಿಧನ

ಕೋಟ: ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟೋದ್ಧಾರದ ಕನಸನ್ನು ನನಸಾಗಿಸುವಲ್ಲಿ ಕಳೆದ ಸುಮಾರು ಐವತ್ತು ವರ್ಷಗಳಿಂದ ಡಿವೈನ್ ಪಾರ್ಕ್ ಮೂಲಕ ಶ್ರಮಿಸುತ್ತಿದ್ದ ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಎ.ಚಂದ್ರಶೇಖರ್ ಉಡುಪ (75) ಹೃದಯಾಘಾತದಿಂದ ಇಂದು ಜ.7 ರಂದು ಬೆಳಗಿನ ಜಾವ ದೈವಾಧೀನರಾದರು.

ಡಿವೈನ್ ಪಾರ್ಕ್ ಮೂಲಕ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದ ಇವರು ವೃತ್ತಿಯಲ್ಲಿ ವೈದ್ಯರಾಗಿದ್ದರು. ಎಪ್ಪತ್ತರ ದಶಕದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಅನಂತರ ಡಿವೈನ್ ಪಾರ್ಕ್ ಎಂಬ ಸಂಸ್ಥೆಯನ್ನು ಆರೋಗ್ಯ ಮತ್ತು ಅಧ್ಯಾತ್ಮದ ಚಿಂತನೆಯಲ್ಲಿ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಒಳಿತು ಮಾಡುವ ನಿಟ್ಟಿನಿಂದ ಪ್ರಾರಂಭಿಸಿ ನಾಡಿಗೆ ಸೇವೆ ಸಲ್ಲಿಸುತ್ತಿದ್ದು ಲಕ್ಷಾಂತರ ಮಂದಿ ದೇಶ- ವಿದೇಶದಲ್ಲಿ ಇವರ ಭಕ್ತರು, ಅನುಯಾಯಿಗಳಿದ್ದಾರೆ ಅವರೆಲ್ಲರೂ ಅಕ್ಕರೆಯಿಂದ ಡಾಕ್ಟರ್‌ಜೀ ಎಂದೇ ಇವರನ್ನು ಕರೆಯುತ್ತಿದ್ದರು.

ಡಿವೈನ್ ಪಾರ್ಕ್‌ನ ಸಹಸಂಸ್ಥೆಯಾಗಿ ಎಸ್‌ಎಚ್‌ಆರ್‌ಎಫ್‌ (ಯೋಗಬನ) ಸ್ಥಾಪಿಸಿದ ಇವರು. ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಕ ಕ್ರಮವನ್ನೂ ಮುನ್ನೆಲೆಗೆ ತಂದಿದ್ದರು.

ಮೃತರು ಪುತ್ರ ಡಾ. ವಿವೇಕ ಉಡುಪ ಹಾಗೂ ಸೊಸೆ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಇಂದು ಬೆಳಗ್ಗೆ 10.30 ರಿಂದ ಸಂಜೆ 4 ರ ತನಕ ಮೃತರ ಡಿವೈನ್ ಪಾರ್ಕ್ ನ ಜ್ಞಾನ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಸಿದ್ದು ಅನಂತರ ಅಂತಿಮ ವಿಧಿ ವಿಧಾನ ನೆರವೇರಲಿದೆ ಎಂದು ಡಿವೈನ್ ಪಾರ್ಕ್ ಪ್ರಕಟನೆಯಲ್ಲಿ ತಿಳಿಸಿದೆ.