ಉಡುಪಿ: ಕವಿ ಮುದ್ದಣರಿಗೆ ಅಗೌರವ: ಮಾಜಿ ನಗರಸಭಾ ಸದಸ್ಯ ನಿತ್ಯಾನಂದ ಒಳಕಾಡು ಬೇಸರ

ಹಳೆಗನ್ನಡದ ಶ್ರೇಷ್ಠ ಕವಿ ಉಡುಪಿ ಮುದ್ದಣ ಅವರನ್ನು ಉಡುಪಿ ನಗರಸಭೆ ಮರೆತಿರುವುದು ನಮ್ಮೆಲ್ಲರಿಗೂ ನೋವು ಉಂಟು ಮಾಡಿದೆ ಎಂದು ನಗರಸಭೆಯ ಮಾಜಿ ಸದಸ್ಯರು ಆಗಿರುವ ಸಮಾಜ ಸೇವಕ ನಿತ್ಯಾನಂದ ಒಳಕಾಡು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಂಗಳವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉಡುಪಿ ನಗರದಲ್ಲಿ ಕವಿ ಮುದ್ದಣ ಅವರ ಪುತ್ಥಳಿ ಇದ್ದರೂ ಅದಕ್ಕೆ ಯಾವುದೇ ಗೌರವ ಸಲ್ಲಿಸುವ ಕೆಲಸ ಆಗುತ್ತಿಲ್ಲ. ನಗರಸಭೆಯ ನಡೆಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕವಿ ಮುದ್ದಣ ಹಲವಾರು ಗ್ರಂಥ ಹಾಗೂ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ಸಾಹಿತಿಗೆ ಗೌರವ ತೋರದಿರುವುದು ಬೇಸರದ ಸಂಗತಿ. ಕೇಂದ್ರ ಸರ್ಕಾರ ಈಚೆಗೆ ಕವಿ ಮುದ್ದಣರ ನಾಣ್ಯವನ್ನು ಬಿಡುಗಡೆಗೊಳಿಸಿದೆ. ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಅಂತಹ ಮೇರು ವ್ಯಕ್ತಿಯನ್ನು ಮರೆತಿರುವುದು ಅತ್ಯಂತ ನೋವಿನ ವಿಷಯ. ಇನ್ನಾದರೂ ನಗರಸಭೆ ಎಚ್ಚೆತ್ತುಕೊಂಡು ಮುದ್ದಣರ ಜಯಂತಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಒಳಕಾಡು ಅವರು‌ ಆಗ್ರಹಿಸಿದ್ದಾರೆ.