ಉಡುಪಿ: ನನ್ನ ರಾಜಕೀಯ ನಡೆ ಮತ್ತು ನಿರ್ಧಾರ ಬಗ್ಗೆ ಶಾಸಕ ರಘುಪತಿ ಭಟ್ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಕ್ಷೇತ್ರದ ಜನತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಶಾಸಕ ರಘುಪತಿ ಭಟ್ ಇಂದು ಪತ್ರಿಕಾಗೋಷ್ಠಿಯಲ್ಲಿ ನೀಡಿದ ‘ಪ್ರಮೋದ್ ಮಧ್ವರಾಜ್ಗೆ ಬಿಜೆಪಿ ಗೇಟ್ ಓಪನ್ ಇದೆ’ ಎಂಬ ಹೇಳಿಕೆಗೆ ಆಡಿಯೋ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ.
ರಘುಪತಿ ಭಟ್ ಅನೇಕ ಸುಳ್ಳುಗಳನ್ನು ಹೇಳಿ, ಮೋದಿ ಮತ್ತು ಹಿಂದುತ್ವದ ಹೆಸರಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಅವರು ಚುನಾವಣೆ ಸಂದರ್ಭದಲ್ಲಿ ಕೊಟ್ಟಂತಹ ಯಾವುದೇ ಆಶ್ವಾಸನೆಗಳನ್ನು ಈವರೆಗೂ ಈಡೇರಿಸಿಲ್ಲ. ನಾನು ಚುನಾವಣೆಯಲ್ಲಿ ಗೆದ್ದರೆ ಒಂದು ತಿಂಗಳೊಳಗೆ ಮರಳುಗಾರಿಕೆಯನ್ನು ಆರಂಭಿಸುತ್ತೇನೆಂದು ಹೇಳಿ ವಿಫಲತೆಯನ್ನು ಕಂಡಿದ್ದಾರೆ ಎಂದು ಟೀಕಿಸಿದ್ದಾರೆ.
ನಾನು ಶಾಸಕನಾಗಿ, ಮಂತ್ರಿಯಾಗಿ ಯಾವುದೇ ಕಾಮಗಾರಿಗಳನ್ನು ಮಂಜೂರು ಮಾಡಿದ್ದೆನೋ ಅವುಗಳು ಮಾತ್ರ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಅಲ್ಲದೆ ನಾನು ಮಂಜೂರು ಮಾಡಿದ ಕೆಲವೊಂದು ಕಾಮಗಾರಿಗೆ ರಘುಪತಿ ಭಟ್ ತಡೆಯೊಡ್ಡುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.
ರಘುಪತಿ ಭಟ್ ಶಾಸಕನಾಗಿ ಈವರೆಗೆ ಸಂಪೂರ್ಣರಾಗಿ ವಿಫಲರಾಗಿದ್ದಾರೆ. ಇನ್ನಾದರೂ ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ಈಡೇರಿಸಲಿ ಎಂದು ಸಲಹೆ ನೀಡಿದ್ದಾರೆ.












