679 ಫಲಾನುಭವಿಗಳಿಗೂ ಮನೆ ನಿರ್ಮಿಸಿ ಕೊಡಬೇಕು: ಪ್ರಮೋದ್ ಮಧ್ವರಾಜ್

ಉಡುಪಿ: ನನ್ನ ಅವಧಿಯಲ್ಲಿ ನಗರ ಆಶ್ರಯ ಸಮಿತಿ ಸಭೆಯಲ್ಲಿ ಆಯ್ಕೆಗೊಂಡ ಎಲ್ಲ ಅರ್ಹ 679 ಫಲಾನುಭವಿಗಳಿಗೆ ಪ್ರಸ್ತುತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುವ ವಸತಿ ಸಮುಚ್ಚಯದಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಕಾಂಗ್ರೆಸ್‌ ಆಡಳಿತ ಇದ್ದಂತಹ ಸಂದರ್ಭದಲ್ಲಿ ಸರಳೇಬೆಟ್ಟು, ಸಣ್ಣಕ್ಕಿಬೆಟ್ಟುವಿನಲ್ಲಿ 11 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ, ನನ್ನ ಅಧ್ಯಕ್ಷತೆಯಲ್ಲಿ ಒಟ್ಟು 679 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಆಯ್ಕೆಯಾದ ಎಲ್ಲ ಫಲಾನುಭವಿಗಳು ನಿವೇಶನ ರಹಿತರಾಗಿದ್ದು, ಅವರಿಗೆ ಯಾವುದೇ ಜಾಗವಿಲ್ಲವೆಂದು ಖಾತ್ರಿ ಪಡಿಸಿಕೊಂಡು ಆಯ್ಕೆ ಮಾಡಲಾಗಿತ್ತು. ಆದ್ದರಿಂದ ಯಾವುದೇ ಫಲಾನುಭವಿಗಳನ್ನು ಮನೆ ಹಂಚಿಕೆ ಪಟ್ಟಿಯಿಂದ ಕೈಬಿಡಬಾರದು ಎಂದು ಆಗ್ರಹಿಸಿದರು.
ಪ್ರಸ್ತುತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಸತಿ ಸಮುಚ್ಚಯ ನಿರ್ಮಿಸಿ ಮನೆ ಹಂಚಿಕೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಫಲಾನುಭವಿಗಳಿಗೆ ನಿಗದಿತ ಸಮಯದೊಳಗೆ ವೈಯಕ್ತಿಕ ವಂತಿಕೆ ಕಟ್ಟಲು ಸಾಧ್ಯವಾಗದಿದ್ದರೆ, ಅವರನ್ನು ನಿವೇಶನ ರಹಿತರ ಪಟ್ಟಿಯಿಂದ ಕೈಬಿಡಬಾರದು. ನಿವೇಶನ ರಹಿತರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಏಕಕಾಲದಲ್ಲಿ ತಮ್ಮ ಪಾಲಿನ ಹಣವನ್ನು ಕಟ್ಟಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಅವರಿಗೆ ಹಣ ಕಟ್ಟಲು ಸಮಯ ಕೊಡಬೇಕು ಅಥವಾ ಬ್ಯಾಂಕ್‌ ಮೂಲಕ ಸಾಲ ಒದಗಿಸಿಕೊಡಬೇಕು ಎಂದರು.
ನಾನು ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ಯಾವುದೇ ಪ್ರಭಾವಕ್ಕೆ ಒಳಗಾಗದೆ, ಅರ್ಹ ನಿವೇಶನ ರಹಿತರನ್ನು ಮಾತ್ರ ಆಯ್ಕೆ ಮಾಡಿದ್ದೇವೆ. ಹಾಗಾಗಿ ಅವರಿಗೆ ಅನ್ಯಾಯ ಆಗಬಾರದು. ಒಂದು ವೇಳೆ ಅವರಿಗೆ ಜಾಗ ಇರುವುದು ಗೊತ್ತಾದರೆ, ಅವರನ್ನು ನಿವೇಶನ ರಹಿತರ ಪಟ್ಟಿಯಿಂದ ಕೈಬಿಡಿ ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ನಗರಸಭೆ ಸದಸ್ಯ ರಮೇಶ್‌ ಕಾಂಚನ್‌, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ ಅಮೀನ್‌ ಪಡುಕೆರೆ, ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್‌ ಇದ್ದರು.