ಉಡುಪಿ: ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಆಹಾರೋತ್ಪನ್ನಗಳು ಲಭ್ಯವಾಗುವಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಆಹಾರ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸಿದ್ಧ ಆಹಾರ ಉದ್ದಿಮೆಗಳನ್ನು ಪ್ರಾರಂಭಿಸುವ ಮುನ್ನ ಪ್ರತಿಯೊಬ್ಬರೂ ಸಕ್ಷಮ ಪ್ರಾಧಿಕಾರದಿಂದ ತಪ್ಪದೇ ಪರವಾನಗಿಯನ್ನು ಪಡೆದುಕೊಳ್ಳಬೇಕು. ಒಂದೊಮ್ಮೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಆಹಾರ ಮಾರಾಟ ಮಾಡುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆಹಾರ ಸುರಕ್ಷಾ ಅಧಿಕಾರಿಗಳಿಗೆ ಈ ರೀತಿಯ ದೂರುಗಳು ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದಲ್ಲಿ ತಪ್ಪದೇ ಸಂಬoದಪಟ್ಟ ವಹಿವಾಟು ಘಟಕಗಳಿಗೆ ಭೇಟಿ ನೀಡಿ, ಅವುಗಳ ಪರೀಕ್ಷೆಗಳನ್ನು ಕೈಗೊಂಡು ತಪ್ಪಿತಸ್ಥರೆಂದು ಕಂಡುಬoದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯ ಖಾಸಗಿ ಸೇರಿದಂತೆ ಎಲ್ಲಾ ಹಾಲು ಮಾರಾಟದ ಹಾಲುಗಳನ್ನು ಆಗಿಂದಾಗ್ಗೆ ಅದರ ಗುಣಮಟ್ಟವನ್ನು ಹಾಗೂ ಕುಡಿಯುವ ನೀರು ಘಟಕ ಹಾಗೂ ಪ್ಯಾಕೇಜ್ಡ್ ಕುಡಿಯುವ ನೀರುಗಳನ್ನು ಪರೀಕ್ಷಿಸಬೇಕು ಎಂದ ಅವರು, ದೇವಾಲಯದಲ್ಲಿ ಸಾರ್ವಜನಿಕರಿಗೆ ನೀಡುವ ಪ್ರಸಾದವನ್ನೂ ಸಹ ಪರೀಕ್ಷಿಸಬೇಕೆಂದು ಸಲಹೆ ನೀಡಿದರು.
ಸ್ಥಳಿಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಪ್ರತೀವರ್ಷ ಪರವಾನಗಿ ನವೀಕರಣಗೊಳಿಸುವಾಗ ಆಹಾರ ಸುರಕ್ಷತೆ ಬಗ್ಗೆ ಪರವಾನಗಿ ಪಡೆದಿರುವವರ ಬಗ್ಗೆ ಗಮನಿಸುವುದು ಸೂಕ್ತ ಎಂದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ ಹಾಗೂ ಶ್ವಾಸಕೋಶ ಸಂಬoದ ಮಾರಕ ಕಾಯಿಲೆಗಳು ಉಂಟಾಗಿ, ಅಲ್ಪಾವಧಿಯಲ್ಲಿಯೇ ಅವುಗಳು ಉಲ್ಬಣಗೊಂಡು ಮರಣ ಹೊಂದುವ ಸಾಧ್ಯತೆ ಇರುವ ಹಿನ್ನಲೆ, ಜನ ಸಾಮಾನ್ಯರಿಗೆ ತಂಬಾಕು ಉತ್ಪನ್ನ ಬಳಕೆಯಿಂದಾಗುವ ಪರಿಣಾಮದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವರುಗಳು ತಂಬಾಕು ಉತ್ಪನ್ನಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು ಎಂದರು.
ಕೋಟ್ಪಾ ಕಾಯಿದೆ ಉಲ್ಲಂಘಿಸಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವರ ಮೇಲೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕೆಂದು ಸೂಚನೆ ನೀಡಿದರು.
ಶಾಲೆಯ ಆವರಣದ ಸುತ್ತ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಎಚ್ಚರಿಕಾ ಫಲಕಗಳನ್ನು ಶಾಲೆಯ ಮುಖ್ಯಸ್ಥರು ಅಳವಡಿಸುವ ಜೊತೆಗೆ ತಂಬಾಕು ಉತ್ಪನ್ನಗಳು ಮಾರಾಟ ಮಾಡದಂತೆ ಕ್ರಮ ವಹಿಸಬೇಕು ಎಂದ ಅವರು, ಎಲ್ಲಾ ಸರಕಾರಿ ಕಚೇರಿಗಳು ತಂಬಾಕು ಮುಕ್ತ ಕಚೇರಿಗಳನ್ನಾಗಿ ಫಲಕಗಳನ್ನು ಅಳವಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಪ್ರೇಮಾನಂದ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ನಾಗರತ್ನ ಹಾಗೂ ಅರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕರಿಗಳು ಉಪಸ್ಥಿತರಿದ್ದರು.












